DSC_0996

ಕುಡಿಯುವ ನೀರಿನ ಪೂರೈಕೆಗೆ ಪ್ರಥಮ ಆದ್ಯತೆ ನೀಡಿ : ರಾಹುಲ್ ರತ್ನಂ ಪಾಂಡೆಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 1- ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಪ್ರಥಮ ಆದ್ಯತೆ ನೀಡುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್‌ನ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ. ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ತಾಪಮಾನ ಶೇ.40 ಸೆಲ್ಸಿಯಸ್ ನಸ್ಟಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಹೊಸ ಬೋರ್ವೆಲ್‌ಗಳನ್ನು ಕೊರೆಯಿಸಲು ಕ್ರಮ ವಹಿಸಿ. ಅಲ್ಲದೇ ಖಾಸಗಿ ಬೋರ್ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಕೆ ಮಾಡಬೇಕು. ಖಾಸಗಿ ಬೋರ್ವೆಲ್ ಲಭ್ಯವಿಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಬೋರ್ವೆಲ್‌ಗಳ ಸುಸ್ಥಿತಿಯನ್ನು ಪರಿಶೀಲಸಬೇಕು. ಯಾವುದೇ ರೀತಿಯ ಸಣ್ಣಪುಟ್ಟ ದುರಸ್ಥಿ ಮಾಡಿಸಬೇಕಾಗಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಹೊಸ ಬೋರ್ವೆಲ್ ಕೊರೆಯಿಸಲು ಅಗತ್ಯವಿರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿ 15 ದಿನಗಳೊಳಗಾಗಿ ಸಲ್ಲಿಸಿದ್ದಲ್ಲಿ ಹೊಸ ಬೋರ್ವೆಲ್ ಕೊರೆಯಿಸಲು ಅನುಮೋದನೆ ನೀಡಲಾಗುವುದು. ಹೊಸ ಬೋರ್ವೆಲ್‌ಗಳಿಗಾಗಿ ಸಲ್ಲಿಸುವ ಪ್ರಸ್ತಾವನೆಯಲ್ಲಿ ಬೋರ್ವೆಲ್ ಅವಶ್ಯವಿರುವ ಸ್ಥಳದ ಮಾಹಿತಿಯ ಜೊತೆಗೆ ನೀರು ಲಭ್ಯವಿರುವ ಕುರಿತು ಜಿಯೋಲಿಜಿಸ್ಟ್ ವರದಿ ನೀಡಬೇಕು. ಈ ವರದಿಯನ್ನು ಪರಿಶೀಲಿಸಿ ಅವಶ್ಯವಿದ್ದರೆ, ಹೊಸ ಬೋರ್ವೆಲ್ ಕೊರೆಯಿಸಲು ಅನುಮತಿ ನೀಡಲಾಗುವುದು. ವಿಫಲವಾದ ಬೋರ್ವೆಲ್‌ಗಳ ಸೂಕ್ತ ಮಾಹಿತಿ ನೀಡಬೇಕು. ಕೆಲವು ಬೋರ್ವೆಲ್‌ಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿರುವ ಕಾರಣ ವಿಫಲ ಎಂದು ಕೈಬಿಡಲಾಗಿದ್ದು, ಅಂತಹ ಯಾವುದಾದರೂ ಬೋರ್ವೆಲ್ ಒಂದರಲ್ಲಿ ಹ್ಯಾಂಡ್ ಪಂಪ್ ಅಳವಡಿಸಿ ನೋಡಿ, ಹ್ಯಾಂಡ್ ಪಂಪ್ ಮೂಲಕ ಜನರಿಗೆ ನೀರು ದೊರೆತರೆ ಇದೇ ಪ್ರಯತ್ನವನ್ನು ಇತರ ಸ್ಥಳಗಳಲ್ಲಿಯೂ ಅನುಸರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ನಗರ ಪ್ರದೇಶದ 117 ಮತ್ತು ಗ್ರಾಮೀಣ ಭಾಗದ 560 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಮಾಹಿತಿ ಇದ್ದು, ನಗರ ಪ್ರದೇಶಗಳ ಅಂಗನವಾಡಿಗಳಿಗೆ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ, ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳು ನೀರಿನ ಸೌಲಭ್ಯ ಕುಡಿಯುವ ನೀರಿನ ಕಲ್ಪಿಸಬೇಕು ಎಂದರು.

ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಸಹ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಮರ್ಪಕವಾಗಿ ನೀರು ಸಿಗಬೇಕು. ನೀರಿನ ಪೂರೈಕೆ ಆಗದೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಗಳಿಗೆ 7 ದಿನಗಳೊಳಗಾಗಿ ನೀರು ಸಂಪರ್ಕ ಒದಗಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ಪ್ರತಿ ತಾಲ್ಲೂಕಿಗೆ ಎರಡರಂತೆ ನೀರಿನ ಟ್ಯಾಂಕರ್ ವ್ಯವಸ್ಥೆಯನ್ನು ಆಯಾ ತಾ.ಪಂ ಅಧಿಕಾರಿಗಳು ಮಾಡಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆ ಆಗುವ ಜಿಲ್ಲೆಯ ಬೋರ್ವೆಲ್‌ಗಳು, ಟ್ಯಾಂಕ್‌ಗಳು ಹಾಗೂ ಇತರ ನೀರಿನ ಸಂಗ್ರಹಗಳಲ್ಲಿ ಕ್ರಮೇಣವಾಗಿ ನೀರಿನ ಪರೀಕ್ಷೆಗಳನ್ನು ಮಾಡುವಂತೆ ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ, ಜಿ.ಪಂ ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಸೇರಿದಂತೆ ಕುಡಿಯು ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!