IMG-20240704-WA0004

ದೇಶಿ ಹಸುಗಳನ್ನು ಉಳಿಸಿ ಬೆಳೆಸಲು ಬಳೂಟಗಿ ಯುವಕರಿಂದ ಜಾಗೃತಿ ಜಾಥಾ

ಕುಷ್ಟಗಿ: ದೇಶಿಯ ನಾಟಿ (ಜವಾರಿ) ಹಸುಗಳನ್ನು ಉಳಿಸಿ ಬೆಳೆಸಬೇಕು ಎಂದು ತಾಲೂಕಿನ ಬಳೂಟಗಿ ಗ್ರಾಮದ ಯುವಕರ ತಂಡವೊಂದು ಬಳೂಟಗಿ ಗ್ರಾಮದಿಂದ ಕೊಪ್ಪಳ ಗವಿಮಠದವರೆಗೆ ಕಾಮಧೇನು ಕಳವಳ ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು.
ಈ ಜಾಗೃತಿ ಜಾಥಾದ ಮುಖ್ಯಸ್ಥ ಕಲಾವಿದ ರವಿಕುಮಾರ ಬಳೂಟಗಿ ಮಾತನಾಡಿ ನಮ್ಮ ಭಾರತೀಯ ದೇಶಿ ಹಸುಗಳು ಅಲ್ಪನೀರು ಸ್ವಲ್ಪ ಆಹಾರ ತಿಂದು ಅಮೃತವನ್ನು ಕೊಡುತ್ತವೆ ಅದು ನಮಗೆ ಕಾಮಧೇನು ಕಲ್ಪವೃಕ್ಷವಾಗಿದೆ ಅಂತಹ ನಾಟಿ ಹಸುಗಳಿಗೆ ಇಂದಿನ ದಿನಮಾನಗಳಲ್ಲಿ ಬೆಲೆಯೆ ಇಲ್ಲದಂತಾಗಿರುವದು ಆತಂಕಕಾರಿ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ರೈತರು ಸಹಿತ ಹೈಬ್ರೀಡ್ ಹಸುಗಳಿಗೆ ಮೊರೆಹೋಗುತ್ತಿದ್ದು ಕೇವಲ ಲಾಭಕ್ಕಾಗಿ ಆಸೆಯನ್ನು ಪಡುತ್ತಿದ್ದಾರೆ ನಮ್ಮ ದೇಶಿಯ ಹಸುವನ್ನು ಯಾರು ಸಾಕುತ್ತಿಲ್ಲ ಈ ನಾಟಿ ಹಸುವನ್ನು ದೇಶಿಯ ಪುಣ್ಯಕೋಟಿಯಂತೆ ಸಾಕುತಿದ್ದ ರೈತರು ಇಂದು ಕೈ ಚಲ್ಲಿದ್ದಾರೆ. ಈ ನೆಲ, ಜಲಕ್ಕೆ ಹೊಂದಿಕೊಂಡು ಬದುಕುವ ಪ್ರಾಣಿಯಾಗಿದೆ ಕನಿಷ್ಠ ಪ್ರಮಾಣದಲ್ಲಿ ಹಾಲನ್ನು ಕೊಡುವ ಕಾರಣಕ್ಕೆ ಅದರ ಶಕ್ತಿ ಏನು ಕಡಿಮೆಯಾಗಿಲ್ಲ ಎಂದರು.
ದೇಶಿಯ ಜವಾರಿ ಹಸುವಿನ ಹಾಲನ್ನು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗಾಗಿ ನಿಗದಿತ ಬೆಲೆಗೆ ಸರ್ಕಾರವೇ ತೆಗೆದುಕೊಳ್ಳುವಂತಾಗಬೇಕು, ಸ್ಥಳೀಯ ಆಡಳಿತ ಹಾಲು ಉತ್ಪಾದನೆ ಮತ್ತು ಶೇಖರಣೆಯ ಜವಾಬ್ದಾರಿಯನ್ನು ತೆಗೆದುಕೊಂಡು ತುಪ್ಪ ಮತ್ತು ಹಾಲನ್ನು ಎರಡು ಮಕ್ಕಳಿಗೆ ನೀಡುವಂತೆ ಯೋಜನೆ ಮಾಡಿದರೆ ಮುಂಬರುವ ಪೀಳಿಗೆಯು ಮಾನಸಿಕ ಸದೃಢತೆ ದೈಹಿಕ ಸದೃಢತೆ, ಮಾನವೀಯ ಸಂವೇಧನೆಗಳನ್ನು ಮೈಗೂಡುವಂತಾಗುತ್ತದೆ ಎಂದರು.
ನಮ್ಮ ಮಕ್ಕಳಿಗೆ ಅಮೃತವನ್ನು ಕೊಡಬೇಕೆ ಹೊರತು ವಿಷ ಮಿಶ್ರಿತವಾದ ವಿದೇಶಿ ಹಸುವಿನ ಹಾಲು ಕೊಡಬಾರದು ನಾಟಿ ಹಸುವಿನ ಹಾಲನ್ನು ಹೆಚ್ಚು ಉತ್ಪಾದನೆ ಮಾಡುವಂತಾಗಲಿ ಇದರಿಂದ ಸದೃಢವಾದ ಮಕ್ಕಳಿಂದ ಸದೃಢ ದೇಶವನ್ನು ಕಟ್ಟಲು ಸಾಧ್ಯವಿದೆ ಎಂದರು.

ಗವಿಮಠದ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡು ಹಸು ಮತ್ತು ಕರುವನ್ನು ಮಠದ ಗೋಶಾಲೆಯಲ್ಲಿ ಬಿಟ್ಟು ಬಂದರು. ಈ ಜಾಗೃತಿ ಜಾಥಾದಲ್ಲಿ ರಾಮನಗೌಡ ಪೊಲೀಸ್ ಪಾಟೀಲ್, ಸುರೇಶ ಮಾಲಿಪಾಟೀಲ್, ರವಿಕುಮಾರ ಮಾವಿನಭಾವಿ, ಶಿವುಕುಮಾರ, ಬಸವರಾಜ ಕನಕಗಿರಿ, ವೀರಣ್ಣ ಶೆಟ್ಟರ, ಪ್ರಮೋದ ಮದ್ನಾಳ ಸೇರಿದಂತೆ ಬಳೂಟಗಿ ಗ್ರಾಮದ ಗೆಳಯರ ಬಳಗದವರು ಇದ್ದರು.

Leave a Reply

Your email address will not be published. Required fields are marked *

error: Content is protected !!