ಜೋಡಿ ಕೊಲೆ | ಆರೋಪ ಸಾಬೀತು | ಜೀವಾವಧಿ ಶಿಕ್ಷೆ ಪ್ರಕಟ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ 19: ಜೋಡಿ ಜೋಡಿಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಪಿ.ಕುಮಾರಸ್ವಾಮಿ ರವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿತನು ಕೊಲೆ ಮಾಡಿ ಅಪರಾಧ ಎಸಗಿರುವುದು ದೃಢಪಟ್ಟಿರುತ್ತದೆ ಎಂದು ಅಭಿಪ್ರಾಯ ಪಟ್ಟು ಆರೋಪಿತನಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು ರೂ.1,00,000/- ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಘಟನೆ ವಿವರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ, ದೊಡ್ಡಗೊಲ್ಲರಹಟ್ಟಿ ಗ್ರಾಮದ ವಾಸಿಯಾದ ಮಹಾಲಿಂಗ ತಂದೆ ಲೇಟ್ ಚಿತ್ತಪ್ಪ ಈತನು ತನ್ನ ಹೆಂಡತಿ ಮೃತ ಸುಜಾತಾಳೊಂದಿಗೆ ಗಜಾಪುರ ಸಮೀಪದ ಚಿರಬಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿಹಟ್ಟಿಯನ್ನು ಹಾಕಿ ಗುಡಿಸಲುಗಳನ್ನು ಹಾಕಿಕೊಂಡಿದ್ದು ಆ ಸಮಯದಲ್ಲಿ ಆರೋಪಿತನ ಹೆಂಡತಿ ಸುಜಾತಾಳೊಂದಿಗೆ ಪಿರ್ಯಾದಿದಾರರ ತಮ್ಮ ಎಂ.ಮಂಜುನಾಥನು ತುಂಬಾ ಸಲುಗೆಯಿಂದ ಮಾತನಾಡುತ್ತಿದ್ದು ಈ ಬಗ್ಗೆ ಸುಜಾತಾಳ ಗಂಡ ಆರೋಪಿತನು ಎಂ.ಮಂಜುನಾಥನಿಗೆ ನೀನು ನನ್ನ ಹೆಂಡತಿಯೊಂದಿಗೆ ಬಹಳ ಸಲುಗೆಯಿಂದ ಇರುತ್ತೀ ಇದು ಸರಿಯಲ್ಲ ಹುಷಾರಾಗಿರು ಎಂದು ಆಗಾಗ ಜಗಳ ಮಾಡುತ್ತಾ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಎಂ.ಮಂಜುನಾಥ ಮತ್ತು ತನ್ನ ಹೆಂಡತಿಯೊಂದಿಗೆ ಇಲ್ಲಸಲ್ಲದ ವಿಷಯಕ್ಕೆ ಬೈದಾಡಿ ಜಗಳ ಮಾಡಿ ತನ್ನ ಹೆಂಡತಿ ಸುಜಾತಾಳ ಶೀಲದ ಬಗ್ಗೆ ಅನುಮಾನ ಪಡುತ್ತಿದ್ದು ದಿ: 04-11-2019 ರಂದು ಬೆಳಿಗ್ಗೆ 6 ಗಂಟೆಗೆ ಚಿರಬಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಇರುವ ಮಸಕಲ್ಲುಬಂಡಿ ಹಳ್ಳದಲ್ಲಿ ಆರೋಪಿ ಮಹಾಲಿಂಗನು ಎಂ.ಮಂಜುನಾಥ ಮತ್ತು ಸುಜಾತಾ ಇಬ್ಬರೂ ಒಂದೇ ಸ್ಥಳದಲ್ಲಿ ಇದ್ದುದ್ದನ್ನು ನೋಡಿ ಅವರಿಬ್ಬರನ್ನು ಕಲ್ಲಿನಿಂದ ತಲೆಗಳಿಗೆ ಹೊಡೆದು ಭಾರಿ ರಕ್ತಗಾಯಗಳನ್ನು ಮಾಡಿ ಕೊಲೆ ಮಾಡಿರುತ್ತಾರೆಂದು ಮೃತನ ಅಣ್ಣ ದೊಡ್ಡನಾಗಪ್ಪ ಈತನು ದೂರನ್ನು ಸಲ್ಲಿಸಿದ ಮೇರೆಗೆ ಆರೋಫಿತನ ವಿರುದ್ಧ ಕಲಂ: 302 ಐಪಿಸಿ ಅಡಿಯಲ್ಲಿ ಅಂದಿನ ತನಿಖಾಧಿಕಾರಿಗಳಾದ ತಿಮ್ಮಣ್ಣ ಎಸ್.ಚಾಮನೂರು ಪಿಎಸ್‌ಐ ಇವರು ಆರೋಪಿತನ ವಿರುದ್ಧ ಪ್ರಕರಣವನ್ನು ದಾಖಲು ಮಾಡಿಕೊಂಡು ಸಂಪೂರ್ಣ ತನಿಖೆಯನ್ನು ಕೈಗೊಂಡು ನಂತರ ತನಿಖಾಧಿಕಾರಿಯಾದ ಪಂಪನಗೌಡ ಸಿಪಿಐ ಇವರು ತನಿಖೆಯನ್ನು ಪೂರೈಸಿ ಆರೋಫಿತನ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಅಭಿಯೋಜನಾ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ಮಾಡಿದ ನಂತರ ಹೊಸಪೇಟೆಯ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಪಿ.ಕುಮಾರಸ್ವಾಮಿ ರವರು ಸದರಿ ಪ್ರಕರಣದಲ್ಲಿ ಆರೋಪಿತನು ಕೊಲೆ ಮಾಡಿ ಅಪರಾಧ ಎಸಗಿರುವುದು ದೃಢಪಟ್ಟಿರುತ್ತದೆ ಎಂದು ಅಭಿಪ್ರಾಯ ಪಟ್ಟು ಆರೋಪಿತನಿಗೆ ಜೀವಾವಧಿ ಶಿಕ್ಷೆಯನ್ನು ಅನುಭವಿಸತಕ್ಕದ್ದು ಮತ್ತು ರೂ.1,00,000/- ದಂಡವನ್ನು ಕಟ್ಟತಕ್ಕದ್ದು, ಹಾಗೂ ದಂಡದ ಮೊತ್ತದಲ್ಲಿ ಮೃತ ಎಂ.ಮಂಜುನಾಥನ ವಾರಸುದಾರರಿಗೆ ರೂ.40,000/- ಹಣವನ್ನು ಹಾಗೂ ಮೃತ ಸುಜಾತಾಳ ವಾರಸುದಾರರಿಗೆ ರೂ.40,000/- ಹಣವನ್ನು ಪರಿಹಾರವಾಗಿ ನೀಡತಕ್ಕದ್ದು ಎಂದು ಹಾಗೂ ರೂ.20,000/-ಹಣವನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಎಂದು ದಿನಾಂಕ: 19-09-2025 ರಂದು ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಕೂಡ್ಲಿಗಿ ಠಾಣೆಯ ಪೊಲೀಸ್ ಸಿಬ್ಬಂದಿಯಾದ ಮಂಜುನಾಥ ಕಣವಿಹಳ್ಳಿ ಪಿ.ಸಿ. 564 ಇವರು ಮಾನ್ಯ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿ ಸಹಕರಿಸಿರುತ್ತಾರೆ.
ಸರ್ಕಾರದ ಪರವಾಗಿ ಟಿ.ಅಂಬಣ್ಣ ಸರ್ಕಾರಿ ಅಭಿಯೋಜಕರು ಇವರು ಸಾಕ್ಷಿ ವಿಚಾರಣೆಯನ್ನು ನಡೆಯಿಸಿ ವಾದ ಮಂಡಿಸಿ ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
