ವಿಶ್ವಗುರು ಬಸವೇಶ್ವರರು ಅಕ್ಷರಶಃ ಸಾಂಸ್ಕೃತಿಕ ನಾಯಕರು : ಎಂ.ಎಸ್.ದಿವಾಕರ
ಕರುನಾಡ ಬೆಳಗು ಸುದ್ದಿ
ವಿಜಯನಗರ,17- ಶ್ರೀ ಜಗಜ್ಯೋತಿ ಬಸವೇಶ್ವರರು ಅಕ್ಷರಶಃ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಶ್ರೀ ಬಸವಣ್ಣನವರ ವಚನಗಳು ಮಾನವೀಯ ಮೌಲ್ಯವನ್ನು ತಿಳಿಸುತ್ತವೆ. ಬಸವಣ್ಣನವರ ತತ್ವಗಳು ಮತ್ತು ವಿಚಾರಗಳನ್ನು ನಮ್ಮ ನಿತ್ಯ ಜೀವನದಲ್ಲಿ ಹಾಗೂ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ ಫೆ.17ರಂದು ನಡೆದ ವಿಶ್ವಗುರು, ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯಗೊಳಿಸಿದೆ. ಬಸವಣ್ಣನವರ ವಿಚಾರ, ವಚನ ಸಾಹಿತ್ಯದ ಒಳಾರ್ಥಗಳನ್ನು ಎಲ್ಲಾ ಅಧಿಕಾರಿಗಳು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು. ಆಡಳಿತದ ನೈಪುಣ್ಯತೆ, ಮಾನವೀಯತೆಯ ನಡೆಯನ್ನು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ತಿಳಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವುದಕ್ಕೆ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ಅವರು ಹೇಳಿದರು.
ಹಿಟ್ನಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಹೆಚ್. ಬಸವರಾಜ ಅವರು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕರಾಗಲು ಬೇಕಾದಂತಹ ವ್ಯಕ್ತಿಗುಣಗಳು, ಆಚಾರ, ವಿಚಾರ, ಇರುವುದರಿಂದ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರವು ಘೋಷಿಸಿದೆ. ಬಸವಣ್ಣನವರು ಪ್ರಸ್ಥಾಪಿಸಿದ 5 ಆಚಾರಗಳಾದ ಸದಾಚಾರ, ಶಿವಾಚಾರ, ಲಿಂಗಾಚಾರ, ದೃತ್ಯಾಚಾರ, ರುಣಾಚಾರಗಳನ್ನು ನಮಗೆ ಗೊತ್ತಿಲ್ಲದೇ ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದೇವೆ.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಜನರು ವೈಯಕ್ತಿಕ ಬದುಕಿನಲ್ಲಿ ಕಂಡಂತಹ, ಅನುಭವಿಸಿದಂತಹ ವಿಚಾರಧಾರೆಗಳು, ಅನುಭವ ಮಂಟಪದಲ್ಲಿ ಚರ್ಚೆಗೊಳಪಟ್ಟ ವಿಚಾರಗಳು ವಚನಗಳ ರೂಪದಲ್ಲಿ ಪ್ರಕಟಗೊಳ್ಳುತ್ತಿದ್ದವು. ಬಸವ ಜಯಂತಿಯನ್ನು ಆಚರಣೆಗೆ ತಂದ ಹರ್ಡೇಕರ್ ಮಂಜಪ್ಪನವರು ಸಹ ಬಸವಣ್ಣನವರÀ ವಚನದಿಂದ ಸ್ಫೂರ್ತಿಯಾಗಿದ್ದರು. ಗಾಂಧೀಜಿಯವರಿಗೆ, ಬುದ್ಧನಿಗೆ ಸಿಕ್ಕಿದ್ದ ಹಾಗೆ ಬಸವಣ್ಣನವರಿಗೆ ಯಾವುದಾದರು ರಾಜಶ್ರಯ ಸಿಕ್ಕಿದ್ದರೆ ವಿಶ್ವಪ್ರಸಿದ್ಧಿಯಾಗುತ್ತಿದ್ದರು ಎಂದು ಅವರು ಹೇಳಿದರು.
ಮಲ್ಲಿಕಾರ್ಜುನ ತುವನೂರು ಮತ್ತು ತಂಡದವರು ವಚನಗಾಯನ ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ಬಾಬು, ಹೊಸಪೇಟೆ ಉಪ ವಿಭಾಗಾಧಿಕಾರಿ ಮಹದ್ ಅಲಿ ಅಕ್ರಮ್ ಷಾ, ಹೊಸಪೇಟೆ ತಹಶೀಲ್ದಾರ ಶ್ರುತಿ ಎಂ.ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ, ಬಸವಾಭಿಮಾನಿ ಜಿ.ತಮ್ಮನಾಳಪ್ಪ, ನಿಮಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಮಾವಿನಹಳ್ಳಿ ಬಸವರಾಜ, ಶರಣಸ್ವಾಮಿ, ಇಟಗಿ ಸಂಗಪ್ಪ, ಈಶ್ವರಪ್ಪ ಎಂಜಿನಿಯರ್, ಸಂಗಪ್ಪ ಧರ್ಮಸಾಗರ, ಗುಜ್ಜಲ ಗಣೇಶ ಸೇರಿದಂತೆ ಇನ್ನೀತರ ಪ್ರಮುಖರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
