WhatsApp Image 2024-04-16 at 4.38.52 PM

ಸಡಗರದಿಂದ,ಕವೀಂದ್ರ ತೀರ್ಥರ ಆರಾಧನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16-  ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಆನೆಗುಂದಿಯ ಸರ್ವೇ ನಂ 192 ಶ್ರೀಉತ್ತರಾದಿಮಠದ ನವವೃಂದಾವನ ಗಡ್ಡೆಯಲ್ಲಿ ಹರಿದಾಸ ಪರಂಪರೆಯ ಯತಿವರೇಣ್ಯರಲ್ಲಿ ಓರ್ವರಾದ ಶ್ರೀ ಕವೀಂದ್ರ ತೀರ್ಥರ ಆರಾಧನೆ ಏ.16 ರಿಂದ ಜರುಗಲಿದೆ.

ಶ್ರೀಮದ್ ಉತ್ತರಾದಿಮಠದ ವತಿಯಿಂದ ನವವೃಂದಾವನ ಗಡ್ಡೆಯಲ್ಲಿ ನಡೆಸಲ್ಪಡುವ ಶ್ರೀ ಕವೀಂದ್ರ ತೀರ್ಥರ ಆರಾಧನೆಯ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಮಠದ ದಿವಾನರು ತಿಳಿಸಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠವು ಏ.10, 2024 ರಂದು ನೀಡಿದ ಮಧ್ಯಂತರ ಆದೇಶಕ್ಕೆ ಅನುಗುಣವಾಗಿ ಏ.16, 2024 ರಂದು ಪೂರ್ಣದಿನ ಹಾಗೂ ಏ.17, 2024 ರಂದು ಮಧ್ಯಾಹ್ನ 1 ಗಂಟೆಯ ವರೆಗೆ ಶ್ರೀ ಕವೀಂದ್ರತೀರ್ಥರ ಆರಾಧನೆಯನ್ನು ಶ್ರೀಉತ್ತರಾದಿಮಠದ ವತಿಯಿಂದ ಅವರ ಮೂಲ ವೃಂದಾವನ ಸ್ಥಳದಲ್ಲಿ ನೆರವೇರಿಸಲಾಗುತ್ತದೆ.

ಮೊದಲ ದಿನವಾದ ಇಂದು ಏ.16 ರ ಮಂಗಳವಾರದಂದು ಬೆಳಗ್ಗೆ ಶ್ರೀಮನ್ಯಾಯಸುಧಾ ಪಾಠ, ಪೂಜೆ, ಪಂಚಾಮೃತ, ಜ್ಞಾನಸತ್ರ ವಿಜೃಂಭಣೆಯಿಂದ ನಡೆದವು. ಸಂಜೆ ದೀಪೋತ್ಸವ, ಮತ್ತು ಪಂಡಿತರಿಂದ ಉಪನ್ಯಾಸಗಳು ನಡೆದವು. ಮಧ್ಯಾಹ್ನ 02-30 ರಿಂದ ಸಂಜೆ 07 ಗಂಟೆಯವರೆಗೆ ಸಾರ್ವಜನಿಕ ದರ್ಶನ ಇರಲಿದೆ. ಏ.17ರಂದು ಬೆಳಗ್ಗೆ ಶ್ರೀಮನ್ಯಾಯಸುಧಾ ಪಾಠ,  ಪೂಜೆ, ಪಂಚಾಮೃತ, ಜ್ಞಾನಸತ್ರ ಕಾರ್ಯಕ್ರಮ ಇರುತ್ತದೆ. ಬೆಳಿಗ್ಗೆ 10-30ರಿಂದ ಸಾರ್ವಜನಿಕ ದರ್ಶನ ಇರುತ್ತದೆ. ಎಲ್ಲಾ ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.

ವಿಶ್ವವಿಖ್ಯಾತ ಹಂಪಿಯ ಪರಿಸರದಲ್ಲಿರುವ, ಅತ್ಯಂತ ಪ್ರಾಚೀನವಾದ ಹಾಗೂ ಪವಿತ್ರತಮವಾದ ಈ ತಾಣದಲ್ಲಿ ದೇಶದ ನಾನಾ ಭಾಗಗಳಿಂದ ಅನೇಕ ಭಕ್ತರು ಆಗಮಿಸಲಿದ್ದಾರೆ. ಇದಕ್ಕಾಗಿ ಶ್ರೀಮದುತ್ತರಾದಿ ಮಠದಿಂದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಠದ ದಿವಾನರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!