ಮಾವು ಮೇಳ (2)

230 ಟನ್ ಗೂ ಹೆಚ್ಚಿನ ವಿವಿಧ ತಳಿಯ ಮಾವುಗಳ ಮಾರಾಟ: ರೂ.1.90 ಕೋಟಿಗೂ ಹೆಚ್ಚಿನ ವಹಿವಾಟು

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ಕೊಪ್ಪಳ ತೋಟಗಾರಿಕೆ ಇಲಾಖೆಯು ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ನಗರದ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಮೇ ರಿಂದ 23ರ ವರೆಗೆ 11 ದಿನಗಳ ಕಾಲ ಆಯೋಜಿಸಲಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ತೆರೆ ದೊರೆಯಿತು.

2024ರ ಮಾವು ಮೇಳವು ಹಿಂದೆಂದಿಗಿಂತಲೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿ 230 ಟನ್ ಗೂ ಹೆಚ್ಚಿನ ವಿವಿಧ ತಳಿಯ ಮಾವುಗಳನ್ನು ರೈತರು ಮಾರಾಟ ಮಾಡಿ ರೂ.1.90 ಕೋಟಿಗೂ ಹೆಚ್ಚಿನ ವಹಿವಾಟು ಈ ಮೇಳದಲ್ಲಿ ದಾಖಲಾಗಿದೆ. ಗ್ರಾಹಕರು ಅತ್ಯಂತ ಖುಷಿಯಿಂದ ಮೇಳದಲ್ಲಿ ಎಲ್ಲಾ ತಳಿಯ ಮಾವುಗಳನ್ನು ಖರೀದಿಸಿ ಪ್ರತಿ ವರ್ಷವೂ ಈ ಮೇಳದಲ್ಲಿ ಭಾಗವಹಿಸಿ ಗುಣಮಟ್ಟದ ಮತ್ತು ಯೋಗ್ಯ ಬೆಲೆಯ ಮಾವು ಖರೀದಿಸಿ ಎಲ್ಲಾ ಹಣ್ಣುಗಳ ರುಚಿ ಸವಿಯುವುದು ನಮಗೆ ಅತ್ಯಂತ ಖುಷಿ ಮತ್ತು ನೆಮ್ಮದಿಯನ್ನು ತರುತ್ತದೆ ಹಾಗೂ ಇಂತಹ ಮೇಳಗಳು ಪ್ರತಿ ವರ್ಷವೂ ಹೀಗೆ ಮುಂದುವರೆಯಬೇಕೆAದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು 11 ದಿನಗಳ ಕಾಲ ಆಯೋಜಿಸಲಾಗಿತ್ತು. ಈ ಮೇಳವು ಹಿಂದಿನ ಎಲ್ಲಾ ಮೇಳಕ್ಕಿಂತ ಯಶಸ್ವಿಯಾಗಿದ್ದು ಹೆಚ್ಚಿನ ಹಣ್ಣುಗಳ ಮಾರಾಟವಾಗಿದೆ. ಈ ಮೇಳದಲ್ಲಿ ಭಾಗವಹಿಸಲು 60 ಕ್ಕೂ ಹೆಚ್ಚಿನ ರೈತರು ಮೇಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಮೇಳದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ ಮಾವು ಮಾರಾಟ ಮಾಡಲು ರೈತರು ಹಾಗೂ ರೈತ ಉತ್ಪಾದಕ ಸಂಘಗಳು, ಹಾಪ್‌ಕಾಮ್ಸ್, ಇಲಾಖಾ ತೋಟಗಾರಿಕೆ ಕ್ಷೇತ್ರಗಳಿಗೆ ತಮ್ಮ ಉತ್ಪನವನ್ನು ಮಾರಾಟ ಮಾಡಲು 22 ಮಾರಾಟ ಮಳಿಗೆಳನ್ನು ಉಚಿತವಾಗಿ ತೆರೆಯಲಾಗಿತ್ತು. ಮಾವು ಮಾರಾಟ ಮೇಳದಲ್ಲಿ ಜಿಲ್ಲೆಯ ಏಳು ತಾಲ್ಲೂಕುಗಳ ಮಾವು ಬೆಳೆಗಾರರು ಭಾಗವಹಿಸಿದ್ದರು. ರೈತರು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ 15 ಕ್ಕೂ ಹೆಚ್ಚಿನ ವಿವಿಧ ಮಾವಿನ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿರುತ್ತಾರೆ.

ಕೇಸರ್ ಮತ್ತು ದಶಹರಿ ತಳಿಯ ಮಾವುಗಳಿಗೆ ಹೆಚ್ಚಿನ ಬೇಡಿಕೆ : ಮೇಳದಲ್ಲಿ ಕೇಸರ್ ಮತ್ತು ದಶಹರಿ ತಳಿಯ ಮಾವು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು 150 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಅದೇ ರೀತಿ ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಸಕ್ಕರೆ ಗುಟ್ಟಿ, ಖಾದರ್, ಪುನಾಸ್ ಮತ್ತು ಉಪ್ಪಿನಕಾಯಿ ತಳಿ ಸೇರಿದಂತೆ, ವಿವಿಧ ತಳಿಯ ಮಾವಿನ ಹಣ್ಣುಗಳು 80 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಆಮ್ಲೇಟ್ ಮತ್ತು ಪುನಾಸ್ ಉಪ್ಪಿನಕಾಯಿ ಮಾವಿನ ಕಾಯಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದು 5 ಟನ್‌ಗೂ ಹೆಚ್ಚು ಮಾರಾಟವಾಗಿದೆ.

ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿ ಗ್ರಾಹಕರಿಗೆ ಕೈಗೆಟುವ ದರದಲ್ಲಿ ರೈತರು ನೇರವಾಗಿ ಮಾರಾಟ ಮಾಡಿರುತ್ತಾರೆ. ಇದರಿಂದಾಗಿ ಗ್ರಾಹಕರಿಗೂ ಯೋಗ್ಯ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಲಭಿಸಿದ್ದು ಅವರೂ ಕೂಡಾ ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಳದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಸರಕಾರಿ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದ್ದು, ಹೆಚ್ಚಿನ ಹಣ್ಣು ಖರೀದಿಸಿದಲ್ಲದೇ ನಾವು ಉತ್ತಮ ಗುಣಮಟ್ಟದ ಹಣ್ಣುಗಳನ್ನು ಖರೀದಿಸಲು ಹುಬ್ಬಳ್ಳಿ, ಹೊಸಪೇಟೆ ನಗರಗಳಿಗೆ ಹೋಗಬೇಕಾಗಿತ್ತು, ಆದರೆ ಈ ಸಾರಿ ವಿವಿಧ ತಳಿಯ ಉತ್ತಮ ಹಣ್ಣುಗಳು ಕೊಪ್ಪಳದಲ್ಲಿಯೇ ಲಭ್ಯವಾಗಿದ್ದು, ಕುಟುಂಬ ಸಮೇತ ಬಂದು ಖರೀದಿಸಲು ಅನುಕೂಲವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮಾರುಕಟ್ಟೆಯಲ್ಲಿ ಕೃತಕವಾಗಿ ಮಾಗಿಸಿದ ಹಣ್ಣುಗಳಿಗಿಂತ ಇಲ್ಲಿ ದೊರೆಯುವ ಹಣ್ಣುಗಳ ರುಚಿಕರವಾಗಿದೆ ಹಾಗೂ ಆರೋಗ್ಯ ದೃಷ್ಟಿಯಿಂದ ಉತ್ತಮ. ತೋಟಗಾರಿಕೆ ಇಲಾಖೆಯು ಗ್ರಾಹಕ ಹಾಗೂ ಮಾವು ಬೆಳೆಗಾರರನ್ನು ನೇರವಾಗಿ ಸಂರ್ಪಕಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದ್ದಾರೆ.

ಮಿಯಾಜಾಕಿ ಮಾವಿನ ಹಣ್ಣಿನ ಹವಾ : ಮಾವು ಮೇಳ 2024ರ ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚಿನ ವಿವಿಧ ದೇಶಿ ಮತ್ತು ವಿದೇಶಿ ತಳಿ ಹಣ್ಣುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು, ಅವುಗಳಲ್ಲಿ “ಜಗತ್ತಿನ ದುಬಾರಿ ಮಾವು ಮಿಯಾಜಾಕಿ” ಎಂಬ ಜಪಾನಿನ ಮಾವಿನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಮಿಯಾಜಾಕಿ ಮಾವು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಸುದ್ದಿ ಮಾಧ್ಯಮಗಳ ಮುಖಾಂತರ ಸಾಕಷ್ಟು ಪ್ರಚಾರವನ್ನು ಪಡೆದು ಪ್ರತಿಯೊಬ್ಬರ ಬಾಯಲ್ಲಿ ಮಿಯಾಜಾಕಿ ಮಾವಿನ ತಳಿಯ ಬಗ್ಗೆ ಮಾತನಾಡುವಂತಾಗಿತ್ತು ಹಾಗೂ ಮಿಯಾಜಾಕಿ ಮಾವನ್ನು ನೋಡಲು ಸಾರ್ವಜನಿಕರು ಹಾಗೂ ರೈತರು ಹಾಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ತಂಡೋಪ ತಂಡವಾಗಿ ಬಂದು ಕುತೂಹಲದಿಂದ ವೀಕ್ಷೀಸಿ ಚರ್ಚಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು. ಹಾಗೂ ಸಾಕಷ್ಟು ರೈತರು ತಮ್ಮ ತೋಟದಲ್ಲಿ ಮಿಯಾಜಾಕಿ ಮಾವಿನ ಹಣ್ಣಿನ ತಳಿ ಗಿಡಗಳ ಬೆಳೆಯುವ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿ ಸಸಿಗಳ ಪೂರೈಸುವ ಕುರಿತು ಬೇಡಿಕೆ ಇಡುತ್ತಿದ್ದರು. ಈ ಮೇಳದಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ತಳಿಯು ರಾಜ್ಯಾದ್ಯಾಂತ ಸುದ್ದಿ ಮಾಡಿತು. ಈ ಮೇಳದಲ್ಲಿ ಮಾವಿನ ವಿವಿಧ ಉತ್ಪನ್ನಗಳಾದ ಮಾವಿನ ಪುಳಿಯೋಗರೆ, ಮಾವಿನ ಜೆಲ್, ಮಾವಿನ ಶ್ರೀಕಂಡ, ಮಾವಿನ ತಿರುಳಿನ ಉಪ ಉತ್ಪನ್ನಗಳನ್ನು ಸಹ ಬೇರೆ ಜಿಲ್ಲೆಯ ರೈತರು ಭಾಗವಹಿಸಿ ಮಾರಾಟ ಮಾಡಿ ಗ್ರಾಹಕರ ಖರೀದಿ ಮತ್ತು ಸ್ಪಂದನೆ ಕಂಡು ಖುಷಿ ಪಟ್ಟರು.

ಈ ಮೇಳದಲ್ಲಿ ಮಾವು ಬೆಳೆಗಾರರಾದ ಆನಂದ ರೆಡ್ಡಿ, ಪಂಪಣ್ಣ ಇಂದರಗಿ, ಷಣ್ಮುಖಪ್ಪ ಘಂಟಿ, ಶಿವಣ್ಣ ಹೊಸಮನಿ, ನಾಗಪ್ಪ, ವೀರಬದ್ರಸ್ವಾಮಿ ಬಸವರಾಜ, ಫಕೀರಪ್ಪ ಸ್ವಾಮಿ, ತಂ. ಬಸವರಾಜ ಸ್ವಾಮಿ, ಅರಳಿಮರದ ಫಾರಂ, ವಾಮದೇವ ಎಚ್, ಮಾರುತಿ, ಶ್ರೀಪಾದ ಮುರಡಿ, ಸಹಜ ಸಾವಯವ ಸಮೃದ್ಧಿ ಸಂಸ್ಥೆಯ ರೈತರು ಭಾಗವಹಿಸಿ ಮಧ್ಯವರ್ತಿಗಳಿಲ್ಲದೇ ಮೇಳದಲ್ಲಿ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ ಕಾರಣ ಹೆಚ್ಚಿನ ಆದಾಯವಾಗಿರುತ್ತದೆ ಎಂದು ಇಲಾಖೆಯನ್ನು ಸ್ಮರಿಸುತ್ತಾರೆ. ಅಲ್ಲದೆ ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ವಿಜಯನಗರ ಹಾಗೂ ವಿವಿಧ ಹೊರ ಜಿಲ್ಲೆಯ ಮಾವು ಬೆಳೆಯುವ ರೈತರು ಸಹ ಈ ಮೇಳದಲ್ಲಿ ಭಾಗವಹಿಸಿ ಹಣ್ಣು ಮಾರಾಟದ ಬಗ್ಗೆ ತಿಳಿದುಕೊಂಡಿರುತ್ತಾರೆ.

ಕೇಸರ್ ಮಾವಿನ ಬ್ರ‍್ಯಾಂಡ್ ಬಾಕ್ಸ್ಗೆ ಬೇಡಿಕೆ : ಈ ಮೇಳದಲ್ಲಿ ಕೊಪ್ಪಳ ಕೇಸರ್ ತಳಿಯ ಮಾವಿಗೆ ಹೆಚ್ಚಿನ ಬೇಡಿಕೆ ಬಂದು 2.50 ಕೆ.ಜಿ. ತೂಕದ “ಕೊಪ್ಪಳ ಕೇಸರ್” ಎಂಬ ಬ್ರ‍್ಯಾಂಡ್ ಬಾಕ್ಸ್ಗೆ ಹೆಚ್ಚಿನ ಬೇಡಿಕೆ ಬಂದು 10,000 ಕ್ಕೂ ಹೆಚ್ಚಿನ ಬಾಕ್ಸ್ಗಳನ್ನು ಬೆಂಗಳೂರು ಮತ್ತು ದೆಹಲಿ, ಹುಬ್ಬಳ್ಳಿ, ಹೈದರಬಾದ್, ಮಂಗಳೂರು ಹಾಗೂ ವಿವಿಧ ನಗರಗಳಿಗೆ ರೈತರು ಪ್ಯಾಕ್ ಮಾಡಿ 40 ಟನ್‌ಗೂ ಹೆಚ್ಚಿನ ಕೇಸರ್ ಮಾವಿನ ಹಣ್ಣುಗಳನ್ನು ಬಾಕ್ಸ್ ಮುಖಾಂತರ ಮಾರಾಟ ಮಾಡಿರುತ್ತಾರೆ. ಈ ಬಾಕ್ಸ್ಗಳನ್ನು ತೋಟಗಾರಿಕೆ ಇಲಾಖೆಯಿಂದ ಆರ್.ಕೆ.ವಿ.ವೈ ಯೋಜನೆಯಡಿ ರೈತರಿಗೆ ಸಹಾಯಧನ ಮುಖಾಂತರ ಪೂರೈಸಲಾಗಿತ್ತು.

ಈ ಬಾರಿ ಸುಮಾರು 230 ಟನ್‌ಗೂ ಹೆಚ್ಚಿನ ವಿವಿಧ ತಳಿ ಮಾವಿನ ಹಣ್ಣುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಂದರೆ ಬೇರೆ ಬೇರೆ ಜಿಲ್ಲೆಗಳಿಗೆ ಸರಕು ವಾಹನಗಳ ಮೂಲಕ, ಬಸ್‌ಗಳ ಮೂಲಕ ದೂರದೂರಿನ ಜಿಲ್ಲೆಗಳಿಗೂ ತಲುಪಿಸಿ ಮಾರಾಟ ಆಗಿವೆ. ಕೊಪ್ಪಳ ಕೇಸರ ಎಂದೆ ಪ್ರಸಿದ್ದವಾದ ಈ ತಳಿಗೆ ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯದ ಉದ್ದಗಲಕ್ಕೂ ಬೇಡಿಕೆ ಬಂದಿದ್ದು ನೂರಾರು ಕೆಜಿ ಹಣ್ಣುಗಳನ್ನು ಹೊರ ರಾಜ್ಯದ ಗ್ರಾಹಕರಿಗೂ ತಲುಪಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 11 ದಿನಗಳ ಕಾಲ ನಡೆದ ಮಾವು ಮೇಳದಲ್ಲಿ ಅಂದಾಜು 30 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ರೂ.1.90 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದ್ದು ಈ ಮೇಳವು ಹಿಂದಿನ ಮೇಳಕ್ಕಿಂತಲೂ ಅತ್ಯಂತ ಯಶಸ್ವಿಯಾಗಿದ್ದು, ಹೆಚ್ಚಿನ ಗ್ರಾಹಕರು ಭಾಗವಹಿಸಿ ಹೆಚ್ಚು ಮಾವುಗಳನ್ನು ಖರೀದಿಸಿ ದಾಖಲೆ ನಿರ್ಮಿಸಿರುತ್ತಾರೆ.

ಈ ಬಾರಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖೆಯಿಂದ ಕೊಪ್ಪಳ ಕೇಸರ್ ಬ್ರ‍್ಯಾಂಡಿನ ಪೇಪರ್ ಬ್ಯಾಗ್ ಗಳನ್ನು ನೀಡಲಾಗಿದೆ. ಇದರಿಂದ ಕೊಪ್ಪಳ ಕೇಸರ್ ಹೆಚ್ಚು ಜನಪ್ರಿಯವಾಗಿದೆ, ಅಲ್ಲದೇ ಸಾರ್ವಜನಿಕರು ಪೇಪರ್ ಬ್ಯಾಗ್ ಗಳನ್ನು ಮೆಚ್ಚಿಕೊಂಡಿರುತ್ತಾರೆ.

ಹೆಚ್ಚಿನ ರೈತರು ಮಾವು ಮೇಳದಿಂದ ಉತ್ತೇಜಿತರಾಗಿದ್ದು ಮೇಳದಲ್ಲಿ ಮಾವು ಬೆಳೆಯ ಕುರಿತು ತಾಂತ್ರಿಕ ಮಾಹಿತಿಯನ್ನು ಪಡೆದು ಮಾವು ಬೆಳೆಯಲು ಆಸಕ್ತಿ ತೋರಿದ್ದು, ಮುಂದಿನ ದಿನಗಳಲ್ಲಿ ಕೇಸರ್ ತಳಿಯನ್ನು ಅಧಿಕ ಸಾಂದ್ರತೆ ಬೇಸಾಯ ಪದ್ದತಿಯಲ್ಲಿ 1000 ಕ್ಕೂ ಹೆಚ್ಚಿನ ಎಕರೆ ಪ್ರದೇಶಾಭಿವೃದ್ಧಿ ಕೈಗೊಳ್ಳುವ ಗುರಿ ಹೊಂದಲಾಗಿದೆ. ಹೀಗಾಗಿ ಕೇಸರ ತಳಿಗೆ ಅತೀ ಹೆಚ್ಚಿನ ಬೇಡಿಕೆ ಬಂದಿದ್ದು, ಮುಂಬರುವ ವರ್ಷಗಳಲ್ಲಿ ನೂತನ ತಂತ್ರಜ್ಞಾನ ಗಳಾದ, ಅಧಿಕ ಸಾಂದ್ರ ಪದ್ಧತಿ, ಹನಿನೀರಾವರಿ, ರಸಾವರಿ ಇತ್ಯಾದಿಗಳ ಮೂಲಕ ಒಂದು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ವಿಸ್ತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರೈತರೂ ಕೂಡ ಕೇಸರ ತಳಿ ಮಾವು ಬೆಳೆಯಲು ಅತ್ಯಂತ ಆಸಕ್ತಿ ವಹಿಸಿದ್ದು, ಇಲಾಖೆ ಗುರಿ ಮುಟ್ಟಲು ಸಹಕಾರ ನೀಡಲು ಮುಂದಾಗಿದ್ದಾರೆ. ಒಟ್ಟಾರೆ ಮಾವು ಮೇಳದಿಂದ ರೈತರಿಗೆ ಕೃಷಿಯಲ್ಲಿ ಹೊಸ ಭರವಸೆ ಮೂಡಿದೆ. ಗ್ರಾಹಕರಿಗೆ ಕೇಸರ ತುಂಬ ಇಷ್ಟವಾಗಿದೆ. ಜೊತೆಗೆ ರೈತರು ಜಗತ್ತಿನ ದುಬಾರಿ ಮಾವು ಆದ “ಮಿಯಾಜಾಕಿ” ತಳಿಯ ಮಾವಿನ ಸಸಿಗಳನ್ನು ವಿವಿಧ ನರ್ಸರಿಗಳಿಂದ ತಂದು ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಗತ್ತಿನ ದುಬಾರಿ ಮಾವು ಆದ ಮಿಯಾಜಾಕಿ ಮುಂದಿನ ವರ್ಷದ ಕೊಪ್ಪಳ ಮಾವುಮೇಳದಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆ ಇರುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿರುತ್ತಾರೆ.

ಪ್ರಮಾಣ ಪತ್ರ ವಿತರಣೆ : ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ್ದ ರೈತರು ಹಾಗೂ ಮಾರಾಟಗಾರರಿಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ್ ಅವರು ಪ್ರಮಾಣ ಪತ್ರ ವಿತರಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!