2025ಕ್ಕೆ ಜಿಲ್ಲೆಯನ್ನು ಕ್ಷಯ ಮುಕ್ತವಾಗಿಸುವ ಗುರಿ : ಡಾ.ಶಂಕರ್ ನಾಯ್ಕ್
ಕರುನಾಡ ಬೆಳಗು ಸುದ್ದಿ
ವಿಜಯನಗರ,12- ಮುಂಬರುವ ಸಾಲಿನಲ್ಲಿ ಜಿಲ್ಲೆಯನ್ನು ಕ್ಷಯ ಮುಕ್ತವಾಗಿಸಲು ಹಾಗೂ ರಾಷ್ಟ್ರೀಯ ಆರೋಗ್ಯ ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಅವಿರತ ಶ್ರಮಿಸುತ್ತಿರುವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಶಂಕರ್ ನಾಯ್ಕ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಕಛೇರಿಯಲ್ಲಿ ಶನಿವಾರ 2023-24ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮದವರಿಗಾಗಿ ಆಯೋಜಿಸಿದ್ದ ಕಾರ್ಯಾಗಾರದ ನೇತೃತ್ವ ವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಿರುವ ಮಹತ್ತರ ಯೋಜನೆಗಳನ್ನು ವಿವರಿಸುತ್ತಾ, ಪ್ರಸ್ತುತ ಜಾರಿಗೊಳಿಸಿರುವ ಎಲ್ಲಾ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸಲು ಇಲಾಖೆಯು ಶ್ರಮಿಸುತ್ತಿದ್ದು. ಈ ನಿಟ್ಟಿನಲ್ಲಿ 2025 ನೇ ಸಾಲಿಗೆ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯಿದೆ, ಭ್ರೂಣಹತ್ಯೆ ಮತ್ತು ಭ್ರೂಣಪತ್ತೆ ಕಾರ್ಯ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸ ಲಾಗುವುದು. ಇದರಂತೆ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಹಲವಾರು ಮಹತ್ತರ ಯೋಜನೆಗಳು ಜಾರಿಗೆ ತಂದಿದೆ ಎಂದು ವಿವರಿಸಿದರು.
ಡಾ.ಜಗದೀಶ್ ಪಾಟೀಲ್ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 1100 ಜನ ಕ್ಷಯರೋಗಿಗಳಿದ್ದು ಹೊಸಪೇಟೆ ತಾಲ್ಲೂಕಿನಲ್ಲಿ (350 ) ಕ್ಕೂ ಹೆಚ್ಚು ಜನ ಇದ್ದಾರೆ. ಕಳೆದ ವರ್ಷ ಸುಮಾರು 141 ರೋಗಿಗಳು ಸಾವಿಗೀಡಾಗಿದ್ದಾರೆ. ಆದ್ದರಿಂದ ಈ ರೋಗದ ಬಗ್ಗೆಯಿರುವ ಮೂಡನಂಬಿಕೆ ತೊಲಗಬೇಕು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಮುಖರಾಗಿ ಸಾಮಾನ್ಯರಂತೆ ಜೀವನ ನಡೆಸಬಹುದು.
ಅಪೌಷ್ಟಿಕತೆಯಿಂದ ಬಳಲುವವರೆಗೂ ರೋಗ ನಿರೋಧಕ ಶಕ್ತಿಯಿಲ್ಲದವರಿಗೆ ಬೇಗನೇ ಆವರಿಸಲಿದೆ. ಕ್ಷಯ ರೋಗದ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಕಫ, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಬೆವರು ಬರುವುದು. ಹಸಿವು ಆಗದೆ ಇರುವುದು. ತೂಕ ಕಡಿಮೆ ಆಗುವ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಕ್ಷಯರೋಗ ಪತ್ತೆಯಾದ ವ್ಯಕ್ತಿಗೆ 188 ತಿಂಗಳು ಉಚಿತ ಚಿಕಿತ್ಸೆ ನೀಡಿ ರೋಗ ಗುಣಪಡಿಸಲಾಗುವುದು.
ಜಿಲ್ಲೆಯಲ್ಲಿ 11 ಗ್ರಾಮಗಳು ಕ್ಷಯಮುಕ್ತವಾಗಿದ್ದು. ಈ ನಿಟ್ಟಿನಲ್ಲಿ ಹಲವಾರು ಖಾಸಗಿ ಕಂಪನಿಗಳು, ಖಾಸಗಿ ಆಸ್ಪತ್ರೆಯವರು, ಸಂಘ ಸಂಸ್ಥೆಗಳ ಕೈ ಜೋಡಿಸಿದ್ದಾರೆ ಎಂದರು.
ಡಾ.ಷಣ್ಮುಖ ನಾಯ್ಕ ಅವರು ರೇಬೀಸ್ ಹಾಗೂ ಇತರೇ ಜಂತುಗಳ ಕಡಿತದಿಂದಾಗುವ ಅಪಾಯ ಹಾಗೂ ಚಿಕಿತ್ಸಾ ಕ್ರಮದ ಬಗ್ಗೆ ವಿವರಿಸಿ. ಯಾವುದೇ ಪ್ರಾಣಿ ಕಡಿತಕ್ಕೊಳಗಾದರು ನಿರ್ಲಕ್ಷ್ಯ ವಹಿಸದೇ ಲಸಿಕೆ ಹಾಕಿಸಿಕೊಳ್ಳಿ, ಸಾಕಿದ ಪ್ರಾಣಿ ಪರಚ್ಚಿದರೂ, ಕಚ್ಚಿದರು ನಿರ್ಲಕ್ಷ್ಯ ವಹಿಸಬೇಡಿ. ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ನೀಡಲಾ ಗುತ್ತದೆ. ನಾಯಿಗಿಂತ ಬೆಕ್ಕು ಹೆಚ್ಚು ಅಪಾಯಕಾರಿ, ದುಪ್ಪಟ್ಟು ಜಾಗೃತೆ ವಹಿಸಿ. 30 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಕುಷ್ಠರೋಗದ ಮುಖ್ಯಸ್ಥರಾದ ಡಾ.ರಾಧಿಕಾ ಮಾತನಾಡಿ, ಜ.30- ಫೆ.13 ರವರೆಗೇ ಕುಷ್ಠ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದು, ಪ್ರತಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಇದೆ. ಮೂಢನಂಬಿಕೆ ಹೊರ ಗಿಟ್ಟು ಚಿಕಿತ್ಸೆ ಪಡೆಯಿರಿ ತಾಮ್ರವರ್ಣದ ಮಚ್ಚೆಗಳು ಇದ್ದರೆ ತಪಾಸಣೆ ನಡೆಸಿಕೊಳ್ಳಿ, ಜಿಲ್ಲೆಯಲ್ಲಿ 958 ಕುಷ್ಠರೋಗಿಗಳಿದ್ದು ಹಗರಿಬೊಮ್ಮನಹಳ್ಳಿಯಲ್ಲಿ ಹೆಚ್ಚು ರೋಗಿಗಳಿರುವರು.
ಇತ್ತೀಚಿನ ಒತ್ತಡ ಬದುಕಿನಲ್ಲಿ ಉದ್ವೇಗ, ಖಿನ್ನತೆ ಸಾಮಾನ್ಯವಾಗಿದ್ದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಉಚಿತ ಸಹಾಯವಾಣಿ 14416 ಟೆಲಿಮನಸ್ ಗೆ ಕರೆ ಮಾಡಿ ಸಮಸ್ಯೆ ಹಂಚಿಕೊಳ್ಳಬಹುದು. ಹಾಗೂ ಅಂಗಾಂಗ ದಾನದ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಮತ್ತು ಜಾಗೃತಿ ಮೂಡಬೇಕು ಎಂದು ಆಶಿಸಿದರು.
ಡಾ.ಕಮಲಮ್ಮ ಅವರು ಮಾತನಾಡಿ ಸೊಳ್ಳೆ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗುನ್ಯ, ಆನೆಕಾಲು ಬಾಯಿ ರೋಗ, ಮೆದುಳು ಜ್ವರ ಮೊದಲಾದ ರೋಗಗಳು ಕಾಯಿಲೆಗಳು ಬರುವುದು, ಅದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವಹಿಸಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಹೇಳಿದರು.
ತಾಯಿ ಮಗುವಿನ ರಕ್ಷಣೆಗೆ ಆದ್ಯತೆಗಾಗಿ ಪ್ರಸ್ತುತ 5 ಜನ ಪ್ರಸೂತಿ ತಜ್ಞರು, ಒಬ್ಬ ಪಿಜಿಷಿಯನ್ ಇದ್ದು ಹೆಚ್ಚಿನ ಸಿಬ್ಬಂದಿಗಳ ಅವಶ್ಯವಿದೆ. 250 ಹಾಸಿಗೆ ಆಸ್ಪತ್ರೆಗೆ ಅನುದಾನ ದೊರೆತಿದ್ದು ಮುಂದಿನ ದಿನಗಳಲ್ಲಿ ನಾಲ್ಕುನೂರು ಹಾಸಿಗೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಸ್ವಚ್ಚತೆ ರೋಗಿಗಳ ಹಿತರಕ್ಷಣೆ ಕಾಯ್ದುಕೊಳ್ಳುವ ಗುರಿ ಹೊಂದಿದೆ. ಆಸ್ಪತ್ರೆಗೆ ಸೂಕ್ತ ರೀತಿಯ ಭದ್ರತೆಯು ಒದಗಿಸಲು ಸೆಕ್ಯುರಿಟಿ ಗಾರ್ಡ್ ನೇಮಿಸಲಾಗುವುದು ಹಳೆಯ ನೂರು ಹಾಸಿಗೆ ಆಸ್ಪತ್ರೆಗೆ ಸುಣ್ಣಬಣ್ಣ ಮಾಡಲಾಗುವುದು.
ತಾಯಿ ಮತ್ತು ಮಗುವಿನ ಸುರಕ್ಷತೆ, ಜನನಿ ಶಿಶು ಸುರಕ್ಷತಾ ಕಾರ್ಯಕ್ರಮ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಡಾ.ಜಂಬಯ್ಯ ವಿವರಿಸಿ, ಮಗು ಜನಿಸಿದಾಗಿನಿಂದ ನೀಡುವ ಲಸಿಕೆಗಳು ಅದರ ಕಾಲಾವಧಿ ಹಾಗೂ ಉಪಯೋಗದ ಬಗ್ಗೆ ತಿಳಿಸಿ ಮುಂದಿನ. ಮಾರ್ಚ್ 3ರಂದು ಪಲ್ಸ್ ಪೋಲಿಯೊ ಲಸಿಕಾ ಇರಲಿದ್ದು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಡಾ. ಸ್ವಪ್ನ ಬಾಯಿ ರೋಗದ ಬಗ್ಗೆ ತಿಳಿಸಿದರು ದೊಡ್ಡನಿ ಸ್ವಾಗತಿಸಿದರು. ಧರ್ಮನಗೌಡ, ಪತ್ರಕರ್ತರಾದ ರಾಜು, ಅನಂತ ಜೋಷಿ, ರೇಖಾಪ್ರಕಾಶ್, ವೆಂಕಟೇಶ್, ಬಾಲಕೃಷ್ಣ ವೀರೇಂದ್ರ, ಜಯಪ್ಪ ರಾಥೋಡ್, ಪೂರ್ಣಿಮಾ, ಕೃಷ್ಣ ಲಮಾಣಿ, ಮಂಜುನಾಥ್, ಮಂಜುನಾಥ ಲಕ್ಕಿಮರ, ಕಾಕುಬಾಳು ಪ್ರಕಾಶ್ ಹಾಗೂ ಇತರರು ಇದ್ದರು.
