ಸುಪ್ರೀಂ ಆದೇಶದಂತೆ ಒಳ ಮೀಸಲಾತಿ ಕಲ್ಪಿಸಿಲು ಒತ್ತಾಯಿಸಿ ಸಿಎಂಗೆ ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 20– ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1 ರಂದು ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಭ0ದಿಸಿದ0ತೆ ಮೀಸಲಾತಿ ವಂಚಿತ ಸಮುದಾಯಗಳಿಗೆ ಮಹತ್ವದ ತೀರ್ಪು ನೀಡಿದ್ದು ಮೀಸಲಾತಿ ವಂಚಿತ ಅಲೆಮಾರಿ ಸಮುದಾಯಗಳಿಗೆ ಆದ್ಯತೆ ಮೇರೆಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಪರಿಶಿಷ್ಟಜಾತಿ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಒತ್ತಾಹಿಸಿದೆ.

೪೯ ಸಮುದಾಯಗಳ ಮಹಾ ಒಕ್ಕೂಟದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ನಿಯೋಗವು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ, ೪೯ ಅಲೆಮಾರಿ ಸಮುದಾಯಗಳಿಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ, ಆದ್ಯತೆಯ ಮೇರೆಗೆ ಸೂಕ್ತ ಆದೇಶದೊಂದಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಪರಿಶಿಷ್ಟಜಾತಿಗಳ ಒಟ್ಟು ೧೦೧ ಜಾತಿಗಳ ಪಟ್ಟಿಯಲ್ಲಿ ೪೯ ಅಲೆಮಾರಿ ಜಾತಿಗಳಿವೆ. ಸರ್ಕಾರದ ಮೀಸಲಾತಿ ಪಡೆಯುವಲ್ಲಿ ಬಹುತೇಕ ವಿಫಲವಾಗುತ್ತಾ ಬರುತ್ತಿವೆ. ಇದಕ್ಕೆಲ್ಲಾ ಅಲೆಮಾರಿಗಳು ಒಂದೆಡೆ ನೆಲೆನಿಲ್ಲದೆ ಧಾರ್ಮಿಕ ಭಿಕ್ಷಾಟನೆ ಮತ್ತು ತಮ್ಮ ತಮ್ಮ ಜನಾಂಗದ ಕುಲಕಸುಬಿನ ಮೂಲಕ ತಮ್ಮ ಉದರ ಪೋಷಣೆಗಾಗಿ ಊರೂರು ಅಲೆಯುವ ಅಗೋಚರವಾದಿಗಳಾಗಿದ್ದಾರೆ. ಅನಕ್ಷರತೆ, ಅಸಂಘಟನೆ ಮತ್ತು ಅರಿವಿನ ಕೊರತೆ ಮುಖ್ಯ ಕಾರಣವಾಗಿದೆ. ಈ ಸಮುದಾಯಗಳ ಸಬಲೀಕರಣಕ್ಕೆ ಮುಖ್ಯಮಂತ್ರಿಗಳು ತಕ್ಷಣ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಎಲ್ಲ ಸಮುದಾಯಗಳ ಅಲೆಮಾರಿತನದಿಂದ ೨೦೧೧ ರಲ್ಲಿ ಭಾರತ ಸರ್ಕಾರ ನಡೆಸಿದ ಜನಗಣತಿಯಲ್ಲಿ ಪರಿಗಣನೆಗೆ ಬಂದಿರುವುದಿಲ್ಲ. ಅಲೆಮಾರಿಗಳಿಗೆ ಸರ್ಕಾರಗಳ ಮೂಲಸೌಕರ್ಯಗಳಾದ ಬಿಪಿಎಲ್ ಪಡಿತರಚೀಟಿ, ಮತದಾನದ ಚೀಟಿ, ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರ, ವಾಸಿಸಲಿಕ್ಕೆ ಸೂರು, ಕೃಷಿಭೂಮಿ ಪಡೆಯಲು ಸಾಧ್ಯವಾಗಿಲ್ಲ. ಕನಿಷ್ಠ ಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿಲ್ಲ.

ಈ ಎಲ್ಲಾ ಕಾರಣದಿಂದ ೪೯ ಅಲೆಮಾರಿ ಜನಾಂಗಗಳಲ್ಲಿ ದೇಶಕ್ಕೆ ಸ್ವಾತಂತ್ರ ಬಂದಾಗಿನಿ0ದ ಹಿಡಿದು ಇಂದಿನವರೆಗೂ ಭಾರತ ಮತ್ತು ರಾಜ್ಯ ಸರ್ಕಾರಗಳ ಉನ್ನತ ಸೇವೆಯ ಹುದ್ದೆಗಳ ವರ್ಗದ ಅಧಿಕಾರಿಗಳಾಗಿ ಇದುವರೆಗೂ ನೇಮಕಗೊಂಡಿರುವುದಿಲ್ಲ. ಒಬ್ಬನೇ ಒಬ್ಬ ವ್ಯಕ್ತಿಯೂ ಪದವಿ ಪಡೆದಿಲ್ಲ.

ರಾಜಕೀಯವಾಗಿಯೂ ಸಹ ಒಬ್ಬೇ ಒಬ್ಬ ಜನಪ್ರತಿನಿಧಿ ಆಯ್ಕೆಯು ಸಾಧ್ಯವಾಗಿಲ್ಲ. ಮೀಸಲಾತಿ ವರ್ಗೀಕರಣದಲ್ಲಿ ಜನಸಂಖ್ಯೆಯನ್ನೇ ಮಾನದಂಡವಾಗಿ ಪರಿಗಣಿಸದೇ ಈ ಮೇಲಿನ ಎಲ್ಲಾ ಅಂಶಗಳನ್ನು ಮತ್ತು ಅಲೆಮಾರಿಗಳು ಇದುವರೆಗೂ ಮೀಸಲಾತಿ ಪಡೆಯುವಲ್ಲಿ ಸಾಧ್ಯವಾಗಿಲ್ಲ.ಉನ್ನತ ಶಿಕ್ಷಣ ಹಾಗು ಸರ್ಕಾರಗಳ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ವಿಫಲಗೊಂಡ ಕಾರಣ ಅಲೆಮಾರಿ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ವಂಚಿತಗೊ0ಡು ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದೇವೆ.

ನಮ್ಮ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ವಿಶೇಷ ಪ್ರಥಮ ಆಧ್ಯತೆ ನೀಡುವುದರೊಂದಿಗೆ ಒಳ ಮೀಸಲಾತಿ ಕಲ್ಪಿಸಿಕೊಡುವ ಮೂಲಕ ಅಲೆಮಾರಿಗಳಿಗೂ “ಸಂವಿಧಾನದ ಅಡಿಯಲ್ಲಿ” ಸಮಾನ ಅವಕಾಶ ಕಲ್ಪಿಸಿಕೊಡುವ ಜೊತೆಗೆ “ಸಂವಿಧಾನಶಿಲ್ಪಿ ಅಂಬೇಡ್ಕರ್ ರವರ ಆಶಯದಂತೆ ನಿರ್ಲಕ್ಷಿತ ಮೂಲನಿವಾಸಿಗಳಾದ ಅಲೆಮಾರಿಗಳಿಗೆ ಸ್ವಾಭಿಮಾನದ ಬದುಕು ಕಲಿಸಿಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಕರಾ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ವೀರೇಶ್.ಕೆ, ಕರಾಅಆ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಕೆ.ಚಾವಡಿ ಲೋಕೇಶ್, ಕ.ರ.ತಿಳ್ಳೇಕ್ಯಾತ ಕ್ಷೇಮಾಭಿವೃದ್ಧಿ ರಾಜ್ಯ ಸಂಘದ ಗೌರವ ಅಧ್ಯಕ್ಷ ಮಹೇಂದ್ರರಾವ್ ಸಾಸ್ನಿಕ್, ಕರಾ ದೊಂಬರ ಸಂಘದ ರಾಜ್ಯಾಧ್ಯಕ್ಷ ಚಿನ್ನ ಡಿ.ಆರ್., ಅಕ ಹಂದಿ ಜೋಗಿಸ್ ಸಂಘದ ರಾಜ್ಯ ಉಪಾಧ್ಯಕ್ಷ ಗೋವಿಂದರಾಜು ಎಂ.ವಿ., ಅ.ಕ.ಸುಡುಗಾಡುಸಿದ್ದ ಮಹಾ ಸಂಘದ ರಾಜ್ಯಾಧ್ಯಕ್ಷ ಲೋಹಿತ್ ಬಿ.ಆರ್., ದಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಡಿ.ಶಾಂತರಾಜ, ಅಲೆಮಾರಿ ಸಿಂದೋಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತ ಯಲ್ಲಪ್ಪ, ಕರ್ನಾಟಕ ರಾಜ್ಯ ಘಂಟಿಜೋರ ಅಲೆಮಾರಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ವಿ.ಹೊಸೂರು, ಭಾರತೀಯ ಮಾಂಗಾರೂಡಿ ವೇಲ್‌ಫೇರ್ ಸೊಸೈಟಿ ರಾಜ್ಯಾಧ್ಯಕ್ಷ ಅನಿಲ್ ಕುಮಾರ್ ಎಸ್.ಕಾಂಬಳೆ, ರಾಜ್ಯ ಪಂಪದ ಕ್ಷೇಮಾಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಗಂಗಾಧರ ಮೇತ್ರಿ, ರಾಜ್ಯ ಮುಕ್ರಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರಾಘವೇಂದ್ರ ಮುಕ್ತಿ, ರಾಜ್ಯ ಬೇಡ ಬುಡುಗ ಜಂಗಮ ಹಕ್ಕುಗಳ ಹೋರಾಟಾ ಸಮಿತಿ ರಾಜ್ಯಾಧ್ಯಕ್ಷ ಆಂಜನೇಯ, ಕರ್ನಾಟಕ ರಾಜ್ಯ ಬಂಡಿ ಸಮಾಜ ಅಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಜೇನು, ಕರ್ನಾಟಕ ರಾಜ್ಯ ಎಸ್.ಸಿ, ಎಸ್.ಟಿ. ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ ಜಿಲ್ಲಾದ್ಯಕ್ಷ ಶಿವಕುಮಾರ್ ವೈ., ಸೇರಿದಂತೆ ಎಲ್ಲ ಅಲೆಮಾರಿ ಸಮುದಾಯಗಳ, ಎಲ್ಲ ಜಿಲ್ಲೆಗಳ ಮುಖಂಡರು ಈ ನಿಯೋಗದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!