ಭಜಗೋವಿಂದಂ ಮತ್ತು ಸ್ವಾನುಭವ

ವೀಣಾ ಹೇಮಂತ್ ಗೌಡ ಪಾಟೀಲ್

ಕರುನಾಡ ಬೆಳಗು ಸುದ್ದಿ

ಒಮ್ಮೆ ಶಂಕರಾಚಾರ್ಯರು ಗಂಗಾ ನದಿಯಲ್ಲಿ ಮಿಂದು ಮಡಿಯುಟ್ಟು ವಿಶ್ವೇಶ್ವರನ ದರ್ಶನಕ್ಕೆ ಕಾಶಿಯ ಬೀದಿಯಲ್ಲಿ ನಡೆದುಹೋಗುತ್ತಿದ್ದರು. ಅಲ್ಲಿ ಒಂದು ಮನೆಯ ಜಗುಲಿಯ ಮೇಲೆ ಓರ್ವ ವಯೋವೃದ್ಧ ವ್ಯಾಕರಣದ ಅಭ್ಯಾಸವನ್ನು ಮಾಡುತ್ತಿದ್ದ. ಬೊಚ್ಚು ಬಾಯಿ, ಬಾಗಿದ ಬೆನ್ನು,ಕೃಶವಾದ ಕಾಯ ಈಗಲೋ ಆಗಲೋ ಸಾಯಬಹುದು ಎಂಬಂತೆ ಇದ್ದ ಆತ. ಈ ವಯಸ್ಸಿನಲ್ಲಿ ವ್ಯಾಕರಣವನ್ನು ಕಲಿಯುತ್ತಿರುವ ಆತನ ಮೌಢ್ಯವನ್ನು ಕಂಡು ಶಂಕರಾಚಾರ್ಯರು ‘ಭಜ ಗೋವಿಂದಂ ಭಜ ಗೋವಿಂದಂ ಮೂಢ ಮತೇ’ ಎಂಬ ಶ್ಲೋಕವನ್ನೇ ಬರೆದರು.

ಜೀವನದ ಸಂಧ್ಯಾಕಾಲದಲ್ಲಿ ನಾವು ದೈವ ಚಿಂತನೆಯಲ್ಲಿ ತೊಡಗುವುದನ್ನು ಬಿಟ್ಟು ಲೌಕಿಕ ವ್ಯವಹಾರಗಳಲ್ಲಿ ವ್ಯಸ್ತರಾಗುವುದು ಸರಿಯಲ್ಲ ಎಂಬುದನ್ನು ಕುರಿತು ಅವರ ಬಾಯಿಂದ ಹೊರಟ ಅಶು ಕವಿತೆ ಇದು. ಮೋಹ ಮುದ್ಗರ ಎಂಬ ಅವರ ಈ ಪ್ರಖ್ಯಾತ 31 ನುಡಿಗಳನ್ನು ಹೊಂದಿರುವ ಅಶು ಕವಿತೆ ‘ಭಜಗೋವಿಂದಂ’ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿದೆ.

ಈ ಕಥೆಯನ್ನು ಓದಿದಾಗ ನನಗೆ ತನ್ನ 95ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದ ವ್ಯಕ್ತಿ, ಜೀವನದ ಸಂಧ್ಯಾಕಾಲದಲ್ಲಿ ಈಜು ಕಲಿತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಮಹಿಳೆಯರು, ಸಾಧಾರಣ ಸಾಧನೆಗಳನ್ನು ತಮ್ಮ ಜೀವಿತದ ಅಂತ್ಯಕಾಲದಲ್ಲಿ ಸಾಧಿಸಿದ ಹಲವಾರು ಸಾಧಕರು ಕಣ್ಮುಂದೆ ಬಂದು ಈ ಮಾತು ಸ್ವಲ್ಪ ಕಿರಿಕಿರಿ ಎನಿಸಿತು ಎಂದರೆ ತಪ್ಪಲ್ಲ.

ಇಡೀ ದಿನ ಇದೇ ಗುಂಗಿನಲ್ಲಿ ಕಳೆದ ನನಗೆ ಅಂತಿಮವಾಗಿ ಶಂಕರಾಚಾರ್ಯರಂ ಈ ಮಾತಿನ ಮಹತ್ವದ ಅರಿವಾದದ್ದು ಇಳಿ ಮಧ್ಯಾಹ್ನದ ಹೊತ್ತಿಗೆ.
ನನ್ನ ಸ್ವಾನುಭವವೇ ನನಗೆ ಅರಿವು ಮೂಡಿಸಿದ್ದು ಎಂಬುದು ಮತ್ತಷ್ಟು ವಿಶೇಷ.
ಸುಮಾರು 38 ವರ್ಷಗಳ ಹಿಂದೆ ನಾನು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದೆ. ಮೈಸೂರಿನಿಂದ ವರ್ಗಾವಣೆಗೊಂಡು ಬಂದ ಓರ್ವ ಬ್ಯಾಂಕ್ ಆಫೀಸರರ ಪತ್ನಿ ಭರತನಾಟ್ಯ ಪ್ರವೀಣರಾಗಿದ್ದು ನನ್ನೂರಿನಲ್ಲಿ ಭರತನಾಟ್ಯ ತರಗತಿಗಳನ್ನು ತೆರೆದರು. ಆಗಿನ ಕಾಲಕ್ಕೆ ತುಸು ದುಬಾರಿ ಎನಿಸುವ 25 ರೂಗಳ ಶುಲ್ಕವನ್ನು ತುಂಬಲು ಕೈ ತುಂಬಾ ಸಂಬಳ ಬರುವ ಒಳ್ಳೆಯ ಹುದ್ದೆಯಲ್ಲಿದ್ದ ಮತ್ತು ತಮ್ಮ ಹಿರಿಯರಿಂದ ಸಾಕಷ್ಟು ಆಸ್ತಿ ಪಾಸ್ತಿಗಳನ್ನು ಹೊಂದಿದ್ದ ನನ್ನ ತಂದೆಗೆ ತಕರಾರಿರಲಿಲ್ಲ, ಆದರೆ ಖುದ್ದು ನನಗೆ ತಿಂಗಳಿಗೆ ರೂ.25 ಹಣ ಪಾವತಿಸಿ ಕಲಿಯುವುದು ಅನವಶ್ಯಕ ಎಂದು ತೋರಿತು.
ಯಾವುದಕ್ಕೂ ಒತ್ತಾಯ ಹೇರದ ನನ್ನ ತಂದೆ ತಾಯಿ ನನ್ನಿಷ್ಟದಂತೆ ನನ್ನನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸಿದರು.
ಮುಂದೆ ವಿವಾಹವಾಗಿ ಮುಂಡರಗಿಗೆ ಬಂದ ನನಗೆ
ನನ್ನ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ನೃತ್ಯ ವಿಭಾಗವನ್ನು ತೆರೆಯುವ ಅವಕಾಶ ಒದಗಿ ಬಂತು.
ನನ್ನ 40ನೇ ವಯಸ್ಸಿನಲ್ಲಿ ನನ್ನ ಮಗಳು, ನಮ್ಮ ನೃತ್ಯ ಶಿಕ್ಷಕಿ ಮತ್ತು ಮತ್ತೋರ್ವ ವಿದ್ಯಾರ್ಥಿಯನ್ನು ಸುಮಾರು ನೂರು ಕಿಲೋಮೀಟರ್ ದೂರದ ಹುಬ್ಬಳ್ಳಿಗೆ ನಾನು ಕರೆದೊಯ್ಯಲಾರಂಭಿಸಿದಾಗ ಅಲ್ಲಿನ ನೃತ್ಯ ಶಿಕ್ಷಕಿಯ ಸಲಹೆಯಂತೆ ನಾನು ಕೂಡ ಕಥಕ್ ನೃತ್ಯದಲ್ಲಿ ಪಡೆಯಲಾರಂಭಿಸಿದೆ.

ಚಿಕ್ಕಂದಿನಲ್ಲಿ ನೃತ್ಯ ಶಿಕ್ಷಣ ಕುಂಟೆಬಿಲ್ಲೆ ಆಟದಂತೆ ಭಾಸವಾಗುತ್ತದೆ ನಿಜ ಆದರೆ 40ನೇ ವಯಸ್ಸಿನಲ್ಲಿ ನೃತ್ಯದ ವೇಗ, ಗತಿ, ಚಲನೆಗೆ ನನ್ನ ದೇಹವನ್ನು ಒಗ್ಗಿಸಿಕೊಳ್ಳುವುದು ಬಹಳವೇ ಕಷ್ಟವಾಯಿತು.
ಆದರೂ ಛಲ ಬಿಡದೆ ನಾಲ್ಕೈದು ತಿಂಗಳು ತರಬೇತಿ ಪಡೆದೆನು. ಆ ಮೂರು ಜನರು ಮತ್ತು ನನ್ನ ತರಬೇತಿ ಶುಲ್ಕ ಮತ್ತು ಕಾರಿನಲ್ಲಿ ಹೋಗಿ ಬರಲು ತಿಂಗಳಿಗೆ ಆರು ಸಾವಿರಕ್ಕೂ ಹೆಚ್ಚು ಹಣ ಕೈ ಬಿಡುತ್ತಿತ್ತು. ಮನೆಯ ಜವಾಬ್ದಾರಿ, ಅಡುಗೆಯ ಕೆಲಸ ನನ್ನ ಇತರ ಚಟುವಟಿಕೆಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳಷ್ಟು ಬಾರಿ ಅಸಾಧ್ಯವೆನಿಸುತ್ತಿತ್ತು. ನನ್ನ ಮಗಳು ಅದೇ ಹುಬ್ಬಳ್ಳಿಯಲ್ಲಿ ಪಿ.ಯು. ತರಗತಿಗೆ ವಸತಿ ಶಾಲೆ ಸೇರಿದಳು,ನಮ್ಮ ಸಂಸ್ಥೆಯ ನೃತ್ಯ ಶಿಕ್ಷಕಿ ಕೂಡ
ಎಂ ಕಾಂ ಓದಲು ಹುಬ್ಬಳ್ಳಿ ಸೇರಿಕೊಂಡಳು.
ಇನ್ನು ಕೇವಲ ಓರ್ವ ವಿದ್ಯಾರ್ಥಿ ಮತ್ತು ನನಗೆ ತಿಂಗಳಿಗೆ ಕಾರಿನಲ್ಲಿ ಹೋಗಿ ಬರುವ ವೆಚ್ಚ, ನೃತ್ಯ ತರಗತಿಯ ಶುಲ್ಕ ಜೊತೆಗೆ ಎಲ್ಲವನ್ನು ನಿರ್ವಹಿಸುವುದು ಬೇಡ ಎಂದೆನಿಸಿದಾಗ ನಾನು ಅನಿವಾರ್ಯವಾಗಿ ನೃತ್ಯ ತರಗತಿಗೆ ಗುಡ್ ಬೈ ಹೇಳಿದೆ.

ಕೇವಲ 25 ರೂ ಫೀ ಹಣವನ್ನು ಕಟ್ಟಬೇಕೇ? ಎಂದು ಯೋಚಿಸಿದ ನಾನು ಈಗಲೂ ಫೀ ಹಣ ಕಟ್ಟಲು ಸಾಧ್ಯವಿದ್ದರೂ ಕೂಡ ನೃತ್ಯ ತರಬೇತಿ ಪಡೆಯುವುದು ಅಸಾಧ್ಯವಾಯಿತು. ಹತ್ತರ ಪುಟ್ಟ ಬಾಲಕಿ ಕುಂಟೆಬಿಲ್ಲೆ ಆಡುವುದು ನಮಗೆ ಸಹಜ ಆದರೆ 60ರ ಹರೆಯದಲ್ಲಿ ಕುಂಟೆಬಿಲ್ಲೆ ಆಡುವುದು ಅಸಹಜವಷ್ಟೇ ಅಲ್ಲ ಮತ್ತು ಅಸುರಕ್ಷಿತ ಕೂಡ. ಕೆಲವರಷ್ಟೇ ಇದಕ್ಕೆ ಅಪವಾದ ಎಂದೆನಿಸಬಹುದು.
ಜೀವನದಲ್ಲಿ ಯಾವುದೇ ಜವಾಬ್ದಾರಿಗಳಿಲ್ಲದ ಬಾಲ್ಯದಲ್ಲಿ ವಿದ್ಯಾಭ್ಯಾಸ, ಹರೆಯದಲ್ಲಿ ಶಿಸ್ತಿನ ಅಡಿಪಾಯದ ಶೈಕ್ಷಣಿಕಜೀವನ ಎಲ್ಲ ರೀತಿಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗುವ ತವಕ, ಯೌವ್ವನದಲ್ಲಿ ಉದ್ಯೋಗ, ಮದುವೆ ಮತ್ತು ಮಕ್ಕಳು, ಮಧ್ಯ ವಯಸ್ಸಿನ ಸುಮಾರಿಗೆ ಮನೆಯನ್ನು ಕಟ್ಟಿಕೊಂಡು ಜೀವನದಲ್ಲಿ ನೆಲೆಗಾಣುವುದು, ಮಧ್ಯ ವಯಸ್ಸು ದಾಟಿ ವೃದ್ಯಾಪ್ಯದೆಡೆಗೆ ಅಡಿಯಿಡುವಾಗ ವಯೋ ಸಹಜ ಬೊಜ್ಜು ಸಣ್ಣ ಪುಟ್ಟ ಖಾಯಿಲೆಗಳು ಮಕ್ಕಳ ವಿದ್ಯಾಭ್ಯಾಸ ಅವರ ನೆಲೆಗಾಣುವಿಕೆ, ಮದುವೆ ಮಾಡುವ ಜವಾಬ್ದಾರಿಗಳು…. ಒಂದೇ ಎರಡೇ.
ಮತ್ತೆ 60ರ ವಯಸ್ಸಿನ ಸುಮಾರಿಗೆ ಮರಳಿ ಅರಳುವಂತೆ ಮೊಮ್ಮಕ್ಕಳ ಜೊತೆಗಿನ ಒಡನಾಟ ಹಿರಿಯರನ್ನು ಮರಳಿ ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ಅಲ್ಲೊಂದು ಇಲ್ಲೊಂದು ಸಕಾರಾತ್ಮಕ ಅಪವಾದಗಳು ಇದ್ದರೂ ಕೂಡ ಇದು ಹೀಗಿದ್ದರೆ ಮಾತ್ರ ಚೆನ್ನ.

ಭಜಗೋವಿಂದಂ ಎಂಬ ಶ್ರೀ ಶಂಕರರ ಈ ಅಶು ಕವಿತೆಯಲ್ಲಿ ವ್ಯಕ್ತಿ ತನ್ನ ಜೀವನ ಕಾಲದಲ್ಲಿ ಏನನ್ನು ಮಾಡಬೇಕು ಎಂಬುದರ ಕುರಿತು ಹೇಳಿರುವ ಮಾತುಗಳ ಹಿಂದಿನ ಗೂಡಾರ್ಥ ಯಾವ ಯಾವ ವಯಸ್ಸಿನಲ್ಲಿ ಏನೇನು ಮಾಡಬೇಕೋ ಹಾಗೆ ಮಾಡಿದರೆ ಮಾತ್ರ ಅದು ಸಾರ್ಥಕ ಎನಿಸಿಕೊಳ್ಳುತ್ತದೆ.

ಬೇಸಿಗೆಯಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಚಳಿ ಮತ್ತು ಮಳೆಗಾಲದಲ್ಲಿ ಮಳೆ ಇರುವಂತೆಯೇ, ಕೆಲವು ಕಾರ್ಯಗಳನ್ನು ನಾವು ನಿರ್ದಿಷ್ಟ ವಯೋಮಾನದಲ್ಲಿ ಮಾತ್ರ ಕೈಗೊಳ್ಳುವುದು ಅಪೇಕ್ಷಣೀಯ ಎಂಬ ಶಂಕರ ಭಗವತ್ಪಾದರ ಅಶು ಕವಿತೆಯ ತಾತ್ಪರ್ಯ ಇದೀಗ ಮನದ ಮೂಲೆಯಲ್ಲಿನ ಶಂಕೆಯ ಅಂಧಕಾರವನ್ನು ನಿವಾರಿಸಿ ಅರಿವಿನ ಬೆಳಕನ್ನು ಮೂಡಿಸಿತು.

 

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!