ಒಳಿತನ್ನು ಪರಿಗಣಿಸಿ ನಿರ್ಧಾರ : ಡಾ.ಅಶ್ವತ್ಥನಾರಾಯಣ್
ಕರುನಾಡ ಬೆಳಗು ಸುದ್ದಿ
ಬೆಂಗಳೂರು, 31- ಬಿಜೆಪಿ- ಜೆಡಿಎಸ್ ಪಕ್ಷಗಳು ಒಗ್ಗಟ್ಟು ಮತ್ತು ಪರಸ್ಪರ ವಿಶ್ವಾಸದಿಂದ ಒಂದಾಗಿ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಎದುರಿಸಲಿವೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳಿಗೆ ಬೈಟ್ ನೀಡಿದ ಅವರು ಪ್ರಶ್ನೆಗೆ ಉತ್ತರ ನೀಡಿ, ನಾವು ಮತ್ತು ಜೆಡಿಎಸ್ ಪಕ್ಷಗಳ ನಡುವೆ ಅತ್ಯಂತ ವಿಶ್ವಾಸದ ಪರಿಸ್ಥಿತಿ ಇದೆ. ಒಳಿತನ್ನು ಪರಿಗಣಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಎನ್‍ಡಿಎ ಗೆಲ್ಲಬೇಕೆಂಬ ಉದ್ದೇಶವನ್ನು ಪರಿಗಣಿಸಲಾಗುತ್ತದೆ. ಯೋಗೇಶ್ವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ. ಕುಮಾರಣ್ಣನೂ ಕೈಜೋಡಿಸಲಿದ್ದಾರೆ. ನಾವೆಲ್ಲರೂ ಒಂದಾಗಿ ಇರುತ್ತೇವೆ ಎಂದು ತಿಳಿಸಿದರು. ಚುನಾವಣೆ ಘೋಷಣೆ ಆಗಿಲ್ಲ; ದಿನಾಂಕ ಘೋಷಣೆ ಆದಾಗ ಅಭ್ಯರ್ಥಿ ನಿಶ್ಚಯಿಸಿ ಪ್ರಕಟಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಗಳ ಎನ್‍ಡಿಎ ಅಡಿಯಲ್ಲಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದೇ ಮಾದರಿಯಲ್ಲಿ ನಾವು ಒಗ್ಗಟ್ಟಿನಿಂದ ನಡೆಯಲು ವರಿಷ್ಠರು ತಿಳಿಸಿದ್ದಾರೆ. ನಮ್ಮ ವರಿಷ್ಠರು ಜೆಡಿಎಸ್ ರಾಜ್ಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಜೊತೆಗೆ ಮಾತುಕತೆ ಮಾಡಿದ್ದಾರೆ. ಅಭ್ಯರ್ಥಿ ಕುರಿತು ಮಾತನಾಡಿ ನಿಶ್ಚಯ ಮಾಡಲು ಒಪ್ಪಂದಕ್ಕೆ ಬಂದಿದ್ದೇವೆ ಎಂದು ವಿವರಿಸಿದರು.
ಪ್ರತಿಭಟನೆ ಮಾಡಿದವರ ವಿರುದ್ಧ ಕೇಸ್ : ಪ್ರಜಾಪ್ರಭುತ್ವದ ಅಡಿಯಲ್ಲಿ ನಾವು ಪ್ರತಿಭಟನೆಗೆ ಮುಂದಾದರೆ ಕಾಂಗ್ರೆಸ್ ಸರಕಾರ ಕೇಸಿನ ಮೇಲೆ ಕೇಸು ಹಾಕುತ್ತದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ ತಡೆಗಟ್ಟಿ ಜನಪರವಾಗಿ ಕೆಲಸ ಮಾಡಬೇಕಿತ್ತು. ಆದರೆ, ಅವರು ತಮ್ಮ ಭ್ರಷ್ಟ ನಾಯಕರ ರಕ್ಷಣೆಗಾಗಿ ರಾಜಭವನ ಚಲೋ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷದ ವರಿಷ್ಠರಿಗೂ ನೈತಿಕತೆ ಇಲ್ಲ : ಇಲ್ಲಿನ ಮುಖಂಡರಿಗೂ ನೈತಿಕತೆ ಇಲ್ಲ ಎಂದು ಟೀಕಿಸಿದ ಅವರು, ಕಾರ್ಯಕರ್ತರಿಗೂ ನೈತಿಕತೆ ಇಲ್ಲ ಎಂದರು. ಭ್ರಷ್ಟಾಚಾರ ಮಾಡಿದ ಇವರ ನಾಯಕರು ಮೊದಲು ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಅಧಿಕಾರ ದುರ್ಬಳಕೆ ಮಾಡಿ ಸ್ಪಷ್ಟವಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದ್ದರಿಂದ ರಾಜೀನಾಮೆ ಕೊಟ್ಟು ಗೌರವ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.