IMG20240730150234

ಮಾನವ ಕಳ್ಳಸಾಗಾಣಿಕೆ ಘೋರ ಸಮಸ್ಯೆಯಾಗಿ ಕಾಡುತ್ತಿದೆ: ನ್ಯಾಯಮೂರ್ತಿ ಎಮ್. ಎಲ್. ಪೂಜೇರಿ

ಪ್ರಪಂಚದಲ್ಲಿಯೇ ಮಾನವ ಕಳ್ಳ ಸಾಗಾಣಿಕೆ ಮೂರನೇ ಅತಿ ದೊಡ್ಡ ಪಿಡುಗು ಆಗಿ ಕಾಡುತ್ತಿದ್ದು ಇದಕ್ಕೆ ನಮ್ಮ ದೇಶವು ಹೊರತಾಗಿಲ್ಲ. ಇದಕ್ಕೆ ಮುಖ್ಯವಾಗಿ ಆರ್ಥಿಕ ಸಮಸ್ಯೆಯೇ ಕಾರಣವಾಗಿದ್ದು ಇಡೀ ದೇಶಕ್ಕೆ ಘೋರ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಮ್. ಎಲ್. ಪೂಜೇರಿ ಹೇಳಿದರು.

ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ವಕೀಲರ ಸಂಘ, ಪೊಲೀಸ್ ಇಲಾಖೆ ಕುಷ್ಟಗಿ ಇವರ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾನವ ಸಾಗಾಣಿಕೆ ಹೆಚ್ಚಾಗಿ ವೇಶ್ಯಾವಾಟಿಕೆ, ಬೇಡದ ಕೆಲಸ ಮಾಡುವದಕ್ಕೆ, ಭಿಕ್ಷಾಟನೆಗಾಗಿ ಹೀಗೆ ಹತ್ತು ಹಲವು ಕಾರಣಗಳಿಗಾಗಿ ನಡೆಯುತ್ತದೆ. ಆದ್ದರಿಂದ ಸಾರ್ವಜನಿಕರು ಇದರ ಬಗ್ಗೆ ಎಚ್ಚೆತ್ತುಕೊಂಡು ಸ್ಥಳೀಯ ಪೊಲೀಸ್ ಇಲಾಖೆಗೆ ಇಂಥಹ ಪ್ರಕರಣಗಳು ಕಂಡು ಬಂದಲ್ಲಿ ತಿಳಿಸಬೇಕು. ಚಿಕ್ಕ ಮಕ್ಕಳು ಹಾಗೂ ಮಹಿಳೆಯರಿಗೆ ಅನ್ಯಾಯವಾದಾಗ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ತಿಳಿಸಿ ರಕ್ಷಣೆ ಪಡೆಯಬೇಕು. ನಮ್ಮ ದೇಶದ ಜನರಲ್ಲಿ ಶಿಕ್ಷಣದ ಕೊರತೆ, ಕಾನೂನು ಅರಿವು ಸಮಸ್ಯೆ ಬಹಳ ಇದೆ. ಜನರಲ್ಲಿ ಕಾನೂನಿನ ಬಗ್ಗೆ ಅರಿವೇ ಇಲ್ಲ. ನೂರಕ್ಕೆ ಹತ್ತು ಜನವಾದರೂ ಇಂತಹ ಕಾರ್ಯಕ್ರಮಗಳಿಂದ ಕಾನೂನು ಅರಿಯುವುದು ಅವಶ್ಯಕ ಇದೆ. ಜನರು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಭಾಗಿಯಾಗಬೇಕು. ಎಂದು ತಿಳಿಸಿದರು. 

ನಂತರ ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ಬಹಳ ವಿಸ್ತಾರದ ಜಾಲವಾಗಿ ಹರಡಿದೆ.  ನಮ್ಮ ಕಣ್ಣಮುಂದೆ ಇದ್ದರೂ ನಮಗೆ ಕಂಡು ಬರುವದಿಲ್ಲ. ಇದರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಾಗ ಅಥವಾ ತಮಗಾದ ಅನ್ಯಾಯದ ಬಗ್ಗೆ ನಮ್ಮ ಗಮನಕ್ಕೆ ತಂದಾಗ ಮಾತ್ರ ನಮಗೆ ತಿಳಿಯುತ್ತದೆ. ಆದ್ದರಿಂದ ಕಾನೂನು ತಿಳುವಳಿಕೆ ಅತ್ಯಾವಶ್ಯವಾಗಿದೆ. ಎಲ್ಲರೂ ಕಾನೂನು ತಿಳಿದಾಗ ಮಾತ್ರ ನಮ್ಮ ಸಮಾಜ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು. 

ಪಿಎಸ್ಐ ಹನಮಂತಪ್ಪ ತಳವಾರ ಮಾತನಾಡಿ ಮಾನವ ಕಳ್ಳಸಾಗಾಣಿಕೆ ಘೋರ ಸಮಸ್ಯೆಯಾಗಿ ಕಾಡುತ್ತಿದೆ. ನಮ್ಮ ದೇಶದಲ್ಲಿ ವಾಣಿಜ್ಯ, ಲೈಂಗಿಕ, ಮಹಿಳೆಯರ ಶೋಷಣೆ  ಇನ್ನಿತರ ಉದ್ದೇಶಗಳಿಗಾಗಿ ಕಳ್ಳಸಾಗಾಣಿಕೆ ಆಗ್ತಾ ಇದೆ. ಅನೇಕ ಲಕ್ಷಾಂತರ ಜನ ಈ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದು, ಭಾರತೀಯರು ಬಹುತೇಕರು ಮದ್ಯಪ್ರಾಚ್ಯಕ್ಕೆ ಮಾರಾಟವಾಗುತ್ತಿದ್ದಾರೆ ಎನ್ನುವ ಮಾಹಿತಿ ಇದೆ‌. ಇದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಮುಖ್ಯಕಾರಣ ಶಿಕ್ಷಣದ ಕೊರತೆ, ಅರಿವಿನ ಕೊರತೆ, ಆರ್ಥಿಕ ತೊಂದರೆ, ಬಡತನ ಹೀಗೆ ಅನೇಕ ಕಾರಣಗಳಿಂದ ಮಾನವ ಕಳ್ಳಸಾಗಾಣಿಕೆ ಕಂಡುಬರುತ್ತಿದೆ. ಆದ್ದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಕಾನೂನು ಅರಿವು ಪಡೆದು ತಡೆಗಟ್ಟುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. 

ಈ ಸಂದರ್ಭದಲ್ಲಿ ಎಂ.ಎಲ್ ಪೂಜೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರು, ಮಹಾಂತೇಶ ಚೌಳಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ರಾಯನಗೌಡ ಎಲ್ ಸರಕಾರಿ ಸಹಾಯಕ ಅಭಿಯೋಜಕರು, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಹನಮಂತಪ್ಪ ತಳವಾರ, ಶಿವಕುಮಾರ ದೊಡ್ಡಮನಿ ವಕೀಲ, ಮೈನುದ್ದೀನ ವಕೀಲ ಸೇರಿದಂತೆ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!