ಗಜೆಟ್ ಅಧಿಸೂಚನೆ ವಾಪಸಾತಿಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 31- ಜಮೀರ್ ಅಹ್ಮದ್ ಮತ್ತು ಅವರ ಕಾಂಗ್ರೆಸ್ಸಿನ ತಂಡ, ಸಿದ್ದರಾಮಯ್ಯನವರು ಅನ್ನದಾತನಿಗೆ ಕನ್ನ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಕೆಯಾದ ರೈತರ ಜಮೀನು ವಾಪಸ್ ಲಭಿಸಿ ಸಂತಸದಿಂದ ದೀಪಾವಳಿ ಆಚರಿಸುವಂತಾಗಲಿ ಎಂದು ಆಶಿಸಿದರು. ರೈತರ ಪಹಣಿಗಳಲ್ಲಿ ವಕ್ಫ್ ಜಮೀನು ಎಂದು ನಮೂದಿಸಿದ್ದು, ಅನ್ನದಾತನಿಗೆ ಕನ್ನ ಹಾಕುವ ಕೆಲಸವನ್ನು ಜಮೀರ್ ಅಹ್ಮದ್ ಮತ್ತು ಅವರ ಕಾಂಗ್ರೆಸ್ಸಿನ ತಂಡ, ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಮತ್ತು ಸಿದ್ದರಾಮಯ್ಯನವರಿಗೆ ಮುಸ್ಲಿಮರ ಭೂತ ಹಿಡಿದಿದೆ. ಹುಣಿಸೆ ಬರಲು ತೆಗೆದುಕೊಂಡು ದೆವ್ವ ಬಿಡಿಸುವ ವರೆಗೂ ಬಿಜೆಪಿಯ ನಾವೆಲ್ಲರೂ ರೈತರ ಪರವಾಗಿ ಇರುತ್ತೇವೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಸಮಸ್ಯೆ ಆರಂಭವಾಗಿದ್ದು, ಕೋಲಾರದಲ್ಲೂ ದೇವಸ್ಥಾನದ ಜಮೀನನ್ನು ವಕ್ಫ್ ಬೋರ್ಡ್ ಜಮೀನೆಂದು ನಮೂದಿಸಿದ ಮಾಹಿತಿ ಇದೆ. ನಗರಸಭೆ ಆಸ್ತಿಗಳು, ಮನೆಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದ್ದಾರೆ; ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಆಸ್ತಿಯಾಗಿ ಪಹಣಿಯಲ್ಲಿ ತಿಳಿಸಿದ್ದಾಗಿ ವಿವರಿಸಿದರು.

ಮಂಡ್ಯದ ನಾಗಮಂಗಲ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹುಬ್ಬಳ್ಳಿ, ಬೆಳಗಾವಿ ಸೇರಿ ಎಲ್ಲೆಡೆ ಜನರಿಗೆ ಗೊತ್ತಿಲ್ಲದೆ ಯಾಮಾರಿಸುವ, ನುಸುಳುಕೋರರಂತೆ ವಕ್ಫ್ ಬೋರ್ಡ್ ಕೆಲಸ ಮಾಡುತ್ತಿರುವಂತಿದೆ. ಎಲ್ಲ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಎಂದು ತಿದ್ದಿ ಅನ್ಯಾಯ ಮಾಡುವುದರ ವಿರುದ್ಧ ನವೆಂಬರ್ 4ರಂದು ಬಿಜೆಪಿ ತೀವ್ರ ರೀತಿಯ ಹೋರಾಟ ನಡೆಸಲಿದೆ ಎಂದು ಪ್ರಕಟಿಸಿದರು.
ವಕ್ಫ್ ವಿಚಾರದಲ್ಲಿ ಸರಕಾರವೇ ಭೂಕಬಳಿಕೆದಾರ ಎಂದು ಆಕ್ಷೇಪಿಸಿದರು. ರೈತ ಸಂಘ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು. ಇಲ್ಲವಾದರೆ ಕೃಷಿ ಮಾಡಲು ಜಮೀನೇ ಇರಲಾರದು ಎಂದು ತಿಳಿಸಿದರು.

ಒಬ್ಬ ಮತಾಂಧ, ದೇಶದ ಸಂಸತ್ ನಮ್ಮದೆಂದರೆ, ಇನ್ನೊಬ್ಬ ಸಂಸತ್ತಿಗೆ ಹಣ ಕೊಟ್ಟು ಹೋಗಬೇಕೆಂದು ಹೇಳುತ್ತಾರೆ. ಕರ್ನಾಟಕದ ತಲೆ ಕೆಟ್ಟ ವ್ಯಕ್ತಿಯೊಬ್ಬರು ವಿಧಾನಸೌಧವೂ ವಕ್ಫ್ ಬೋರ್ಡ್ ಆಸ್ತಿ ಎನ್ನುತ್ತಾರೆ. ಇವರು ಈ ದೇಶಕ್ಕೆ ಬಂದದ್ದು ಯಾವಾಗ? ಇವರು ಬಂದು ದಾಳಿ ಮಾಡಿದ್ದಾರೆ. ಕೊಡಗಿನಲ್ಲಿ ಅಪಾರ ಜನರ ಮತಾಂತರ, ದಕ್ಷಿಣ ಕನ್ನಡದಲ್ಲೂ ಕ್ರಿಶ್ಚಿಯನ್ನರ ಮತಾಂತರ ಮಾಡಿದವರು ಎಂದು ತಿಳಿಸಿದರು. ಇದು ಬ್ರಿಟಿಷ್ ಗಜೆಟ್‍ನಲ್ಲಿದೆ ಎಂದು ಹೇಳಿದರು.

ಈಗ ಮತಾಂತರ ಬಿಟ್ಟು, ಜಮೀನು ಹಸ್ತಾಂತರ ನಡೆದಿದೆ. ಸಿದ್ದರಾಮಯ್ಯನವರಿಗೆ ಇವರ ಓಲೈಕೆ ಮಾಡದೆ ಇದ್ದರೆ ನಿದ್ರೆ ಬರುವುದಿಲ್ಲ ಎಂದು ಟೀಕಿಸಿದರು. ವಕ್ಫ್ ಜಮೀನೆಂದು ನಮೂದಿಸಿದ್ದನ್ನು ತೆಗೆದು ರೈತರ ಹೆಸರುಗಳನ್ನು ನಮೂದು ಮಾಡುವವರೆಗೆ ಈ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿಯವರು ಹಿಟ್ ಆಂಡ್ ರನ್ ಎಂದು ಸಿದ್ದರಾಮಯ್ಯನವರು ಕಾಮೆಂಟ್ ಮಾಡಿದ್ದಾರೆ. ನಾವು ತಾರ್ಕಿಕ ಅಂತ್ಯಕ್ಕೆ ಒಯ್ಯದಿದ್ದರೆ ಮುಡಾ ಹಗರಣದಲ್ಲಿ ನಿಮ್ಮ ಮೇಲೆ 420 ಕೇಸ್ ಆಗುತ್ತಿತ್ತೇ ಮುಖ್ಯಮಂತ್ರಿಗಳೇ ಎಂದು ಕೇಳಿದರು. ನಿಮಗೆ ಗೌರವ ಇದ್ದಿದ್ದರೆ 420 ಕೇಸ್ ಆದೊಡನೆ ನೀವು ರಾಜೀನಾಮೆ ಕೊಡಬೇಕಿತ್ತು ಎಂದು ತಿಳಿಸಿದರು. ಇದೆಲ್ಲ ಬಿಜೆಪಿ ಹೋರಾಟದಿಂದ ಆಗಿದೆ ಎಂದು ಗಮನ ಸೆಳೆದರು.

ಇ.ಡಿ., ಲೋಕಾಯುಕ್ತ, ಹೈಕೋರ್ಟ್ ಎಲ್ಲವೂ ನಿಮಗೆ ಛೀಮಾರಿ ಹಾಕಿದೆ. ನಿಮ್ಮ ಬೆಂಬಲಿಗರ ಮನೆ ಮೇಲೆ ಎಲ್ಲ ಕಡೆ ದಾಳಿ ಆಗಿದೆ. ಸಂಪತ್ತು, ದಾಖಲೆಗಳೂ ಸಿಕ್ಕಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ನಿಷ್ಠಾವಂತ ಅಧಿಕಾರಿ ಸಾವಿಗೆ ನ್ಯಾಯ ಕೊಡಿಸಿದ್ದೇವೆ ಎಂದು ವಿವರಿಸಿದರು. 87 ಕೋಟಿ ಹಗರಣ ಆದುದನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎಂದರು.

ನೋಟಿಸ್ ಹಿಂಪಡೆದರೆ ಏನೂ ಆಗದು- ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, 1974ರಲ್ಲಿ ಒಂದು ಗಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಆ ಗಜೆಟ್ ಅಧಿಸೂಚನೆಯನ್ನು ವಾಪಸ್ ಪಡೆಯದಿದ್ದರೆ, ಮುಖ್ಯಮಂತ್ರಿಗಳ ವಕ್ಫ್ ಕುರಿತ ನೋಟಿಸ್ ವಾಪಸ್ ಪಡೆಯುವ ಬೊಗಳೆ ಭಾಷಣದಿಂದ ಯಾವುದೇ ಪ್ರಯೋಜನ ಆಗದು ಎಂದು ವಿಶ್ಲೇಷಿಸಿದರು.

ಬ್ಯಾಂಕಿನಿಂದ ಹಣ ಕೋರಿ ಒಂದು ನೋಟಿಸ್ ಬರುತ್ತದೆ; ಬಡ್ಡಿ ಸಮೇತ ಕಟ್ಟಲು ಸೂಚಿಸುತ್ತಾರೆ. ಯಾರದೋ ಪ್ರಭಾವದಿಂದ ನೋಟಿಸ್ ಹಿಂಪಡೆದರೆ ಹಣ ಕಟ್ಟದೆ ಇರಲು ಸಾಧ್ಯವೇ? ನೋಟಿಸ್ ವಾಪಸ್ ಪಡೆದರೆ ಏನೂ ಆಗದು. ಇದು ರೈತರನ್ನು ದಾರಿ ತಪ್ಪಿಸುವ ಕೆಲಸ ಎಂದು ಟೀಕಿಸಿದರು.

ಜಮೀರ್ ಅಹ್ಮದ್ ಅವರಂತೆ ಪ್ರಚೋದನಕಾರಿ ಭಾಷಣ ಮಾಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ? ಒಂದೆಡೆ ಭೂಮಿ ಕಳಕೊಳ್ಳುವ ಆತಂಕ, ಮತ್ತೊಂದು ಕಡೆ ಈ ರೀತಿ ಬೆಂಕಿ ಹಚ್ಚುವ ಕೆಲಸವನ್ನು ಸರಕಾರವೇ ಮಾಡುತ್ತಿದೆ. ಇಂಥವರು ಸರಕಾರದಲ್ಲಿ ಸಚಿವರಾಗಿ ಮುಂದುವರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದನ್ನು ಪ್ರಶ್ನೆ ಮಾಡಿದರೆ, ನನ್ನನ್ನು ಯಾರು ಸಂಪುಟದಿಂದ ಕೈಬಿಡುತ್ತಾರೆ ಎಂದು ಸವಾಲು ಹಾಕುತ್ತಾರೆ. ಜಮೀರ್ ಅವರು, ಅವರ ಸರಕಾರ, ಅವರ ಮುಖ್ಯಮಂತ್ರಿ, ಅವರದೇ ಪಕ್ಷದ ಹೈಕಮಾಂಡಿಗೆ ಸವಾಲು ಹಾಕಿದ್ದಾರೆ ಎಂದು ವಿವರಿಸಿದರು. ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಇದೇವೇಳೆ ರಾಜ್ಯದ ಜನತೆ, ಮಾಧ್ಯಮ ಮಿತ್ರರಿಗೆ ದೀಪಾವಳಿ ಶುಭ ಕೋರಿದರು.

Leave a Reply

Your email address will not be published. Required fields are marked *

error: Content is protected !!