ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 10- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ವಿಜಯನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ ೧೫ರಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸರ್ಕಾರಿ ಮತ್ತು ಅರೇ ಸರ್ಕಾರಿ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಹೆಚ್.ಎಸ್ ಮನವಿ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ರಚಿಸುವ ಮಾರ್ಗವು ಈಗಾಗಲೇ ಅಂತಿಮವಾಗಿದೆ.
ಸೆಪ್ಟೆಂಬರ್ 15ರಂದು ಬೆಳಗ್ಗೆ 7:30ಕ್ಕೆ ಮಾನವ ಸರಪಳಿ ರಚಿಸುವ ಕಾರ್ಯಕ್ರಮ ಆರಂಭವಾಗಲಿದೆ. ಅಂದು ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮುಖೇನ ವಿಜಯನಗರ ಜಿಲ್ಲೆಯ ಸರಹದ್ದು ಆದ ಗಣೇಶ ದೇವಸ್ಥಾನ ಬಳಿಯ ಟಿ.ಬಿಡ್ಯಾಮ್‌ನ ಮೊದಲನೇ ಸೇತುವೆಯಿಂದ ಮಾನವ ಸರಪಳಿ ರಚನೆ ಆರಂಭವಾಗಿ ಬಳಿಕ ಗಣೇಶ ದೇವಸ್ಥಾನ, ಸಾಯಿಬಾಬಾ ಸರ್ಕಲ್, ಬಸವೇಶ್ವರ ಸರ್ಕಲ್, ಅಪ್ಪು ಸರ್ಕಲ್, ಬಳ್ಳಾರಿ ರೋಡ್ ಸರ್ಕಲ್, ಕಾರಿಗನೂರು, ವಡ್ಡರಹಳ್ಳಿ, ಪಿ.ಕೆ.ಹಳ್ಳಿ, ಬಯಲುವದ್ದಿಗೇರಿ, ಧರ್ಮಸಾಗರ, ಗಾದಿಗನೂರು, ಭುವನಹಳ್ಳಿ ಗ್ರಾಮದವರೆಗೆ ಸೇರಿ ೩೮ ಕಿಲೋ ಮೀಟರ್ ಮಾನವ ಸರಪಳಿಯನ್ನು ರಚಿಸಬೇಕಿರುತ್ತದೆ.
ಆದ್ದರಿಂದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಮುಖಂಡರು, ವಿಜಯನಗರ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.