ಕೃಷಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿ : ಸಂಸದ ತುಕಾರಾಮ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 10- ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ನುರಿತ ಕೃಷಿತಜ್ಞರ ತಂಡದಿಂದ ಸಮೀಕ್ಷೆ ನಡೆದು, ತಜ್ಞರ ಮಾರ್ಗದರ್ಶನದಂತೆ ಜಿಲ್ಲೆಯ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ವಿಶೇಷ ಕ್ರಮ ವಹಿಸಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತ್ತುವಾರಿ ಸಮಿತಿಯ ಅಧ್ಯಕ್ಷರು ಆಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಈ ತುಕಾರಾಮ್ ಅವರು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲನಲ್ಲಿ ನಡೆದ ಕೇಂದ್ರ ಪುರಷ್ಕೃತ ಕಾರ್ಯಕ್ರಮಗಳ 2024-25ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಲ ಕಡೆಗಳಲ್ಲಿ ಕೆಲ ರೀತಿಯ ಬೆಳೆ ಬೆಳೆಯುತ್ತಾರೆ. ಒಟ್ಟಾರೆ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಮಣ್ಣಿನ ಗುಣವನ್ನಾಧರಿಸಿ ರೈತರು ಬೆಳೆ ತೆಗೆಯಬೇಕು. ರೇಷ್ಮೆ, ಹುಣಸೆ, ದ್ರಾಕ್ಷಿ ಹೀಗೆ ಸರ್ವ ರೀತಿಯ ಬೆಳೆ ಬೆಳೆಯಲು ಒಂದು ಮಾಸ್ಟರ್ ಪ್ಲಾನ್ ಮಾಡಬೇಕು. ಜಿಲ್ಲೆಯ ಯಾವ ಯಾವ ತಾಲೂಕಿನಲ್ಲಿ ಯಾವ ರೀತಿಯ ಮಣ್ಣು ಇದೆ. ಯಾವ ಕಡೆಗೆ ಯಾವ ರೀತಿ ಬೆಳೆಯುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ನೀಡಬೇಕು. ಶಾಸಕರೆಲ್ಲರೂ ಒಟ್ಟುಗೂಡಿ ಈ ಬಗ್ಗೆ ಸಮಗ್ರ ಚರ್ಚಿಸಿ, ಯಾವ ಮಣ್ಣಿನಲ್ಲಿ ಯಾವ ರೀತಿ ಬೆಳೆ ಬೆಳೆದರೆ ಹೆಚ್ಚು ಲಾಭವಾಗುತ್ತದೆ ಎಂಬುದರ ಬಗ್ಗೆ ಜಿಲ್ಲೆಯ ರೈತರಿಗೆ ಹೊಸದೊಂದು ಮಾರ್ಗದರ್ಶಿ ಯೋಜನೆ ರೂಪಿಸೋಣ ಎಂದು ಸಂಸದರು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಭೂಮಿ ಮೇಲಿನ ಮಾನವ ಕುಲ ಸೇರಿದಂತೆ ಕೋಟ್ಯಂತರ ಜೀವರಾಶಿಗೆ ನಿತ್ಯ ಅನ್ನ ನೀಡುವ ರೈತರ ಋಣ ತೀರಿಸುವ ಕಾರ್ಯವಾಗಬೇಕು. ಜಿಲ್ಲೆಯ ರೈತರ ಬಾಳು ಬಂಗಾರವಾಗಬೇಕು. ಕೃಷಿ, ರೈತರ ವಿಷಯಗಳಿಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆಗಳು ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದರು ಸಲಹೆ ಮಾಡಿದರು.
ತಾಲೂಕುವಾರು ಜನಸಂಖ್ಯೆ ವಿವರ, ತಾಲೂಕುವಾರು ಆಸ್ಪತ್ರೆಗಳ ವಿವರದೊಂದಿಗೆ ಸಭೆಗೆ ಆಗಮಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಸಂಸದರು, ಆಯಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು, ಅಂಬುಲೆನ್ಸ್, ಸ್ಕಾö್ಯನಿಂಗ್ ಯಂತ್ರ ಸೇರಿದಂತೆ ಯಾವುದೇ ವೈದ್ಯಕೀಯ ಸೌಕರ್ಯಗಳು ಬೇಕಿದ್ದರೆ ತಾಲೂಕವಾರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲು ಸಂಸದರು ಸೂಚನೆ ನೀಡಿದರು. ಡೆಂಗೆ, ವಾಂತಿ ಬೇಧಿ ಪ್ರಕರಣಗಳ ಬಗ್ಗೆ ಸಂಸದರು ಪರಿಶೀಲಿಸಿದರು. ಜಿಲ್ಲೆಯಲ್ಲಿ ಇದುವರೆಗೆ ೩೨೦೮ ಜನರಿಗೆ ರಕ್ತ ತಪಾಸಣೆ ನಡೆಸಿದ ಪೈಕಿ ೨೨೨ ಜನರಲ್ಲಿ ಡೆಂಗೆ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆದು ಎಲ್ಲರು ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅಪೌಷ್ಠಿಕ ಮಕ್ಕಳ ಸಂಖ್ಯೆ ಶೂನ್ಯಕ್ಕಿಳಿಯಲಿ: ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದ ಬಾಲ್ಯ ವಿವಾಹಗಳು ಜಿಲ್ಲೆಯಲ್ಲಿ ಎಲ್ಲೂ ಕೂಡ ನಡೆಯದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಬೀದಿನಾಟಕಗಳನ್ನು ನಡೆಸುವ ಮೂಲಕ ಈ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಮಗುವೊಂದರ ಶೈಕ್ಷಣಿಕ ಬುನಾದಿಯಾದ ಅಂಗನವಾಡಿಗಳು ಸುಧಾರಣೆಯಾಗಬೇಕು. ಗುಣಮಟ್ಟದ ಆಹಾರ ಪೂರೈಕೆ ಮತ್ತು ಸಕಾಲಕ್ಕೆ ಚಿಕಿತ್ಸೆ ಕೊಡಿಸುವ ಮೂಲಕ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕಿಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸಂಸದರು ನಿರ್ದೇಶನ ನೀಡಿದರು.
ಡಿಸಿ, ಸಿಇಓ, ಎಸ್ಪಿ ಅವರಿಗೆ ಸೂಚನೆ : ಬಾಲ್ಯ ವಿವಾಹ, ಅತ್ಯಾಚಾರ ಪ್ರಕರಣಗಳ ಚರ್ಚೆ ಬಂದಾಗ ಯಾರು ಸಹ ವಿಜಯನಗರ ಜಿಲ್ಲೆಯತ್ತ ಬೊಟ್ಟು ಮಾಡಬಾರದು. ಜಿಲ್ಲೆಯ ಹೆಸರು ಕೆಡಬಾರದು. ಅರಿವಿನ ಕೊರತೆಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಪ್ರೌಢಾವಸ್ಥೆಯಲ್ಲಿಯೇ ಬಾಲಕಿಯರು ಗರ್ಭಧರಿಸುತ್ತಿದ್ದಾರೆ. ಇದು ಬದಲಾಗಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಪೋಕ್ಸೊ ಕಾಯಿದೆಯ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಯುದ್ಧೋಪಾದಿಯಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲು ತುರ್ತು ಕ್ರಮ ವಹಿಸಬೇಕು ಎಂದು ಸಂಸದರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯು ಸಮರ್ಪಕ ಅನುಷ್ಠಾನವಾಗಬೇಕು. ನರೇಗಾ ಅನುದಾನ ಸದ್ಭಳಕೆಯಾಗಬೇಕು. ನರೇಗಾ ಕಾಮಗಾರಿ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಹದ್ದಿನ ಕಣ್ಣಿಡಬೇಕು ಎಂದು ಸಂಸದರು ನರೇಗಾ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಿದರು.
ಎಷ್ಟು ರಸ್ತೆಗಳಲ್ಲಿ ನೆಡುತೋಪು ಮಾಡಿದ್ದೀರಿ? ಇದುವರೆಗೆ ಎಷ್ಟು ಪ್ರಗತಿ ಸಾಧಿಸಿದ್ದೀರಿ ಎಂದು ಇದೆ ವೇಳೆ ಸಂಸದರು ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಪ್ರಶ್ನಿಸಿ, ಜಿಲ್ಲೆಯಾದ್ಯಂತ ಎಲ್ಲಾ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ನೆಡುತೋಪು ಮಾಡಲು ಕ್ರಮ ವಹಿಸಲು ಸೂಚನೆ ನೀಡಿದರು.
ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಮಾತನಾಡಿ, ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಬಾಲ್ಯವಿವಾಹದಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಆಗಬೇಕು ಎಂದು ತಿಳಿಸಿದರು.
ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ ಅವರು ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಯಾವುದೇ ವೃಂದದ ಸಿಬ್ಬಂದಿಯ ನೇಮಕವು ಪಾರದರ್ಶಕವಾಗಿ ನಡೆಯಬೇಕು. ಅರ್ಹರಿಗೆ ಉದ್ಯೋಗವಕಾಶ ದೊರೆಯುವಂತಾಗಬೇಕು ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಶಾಸಕರಾದ ಎಲ್.ಕೃಷ್ಣ ನಾಯ್ಕ, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಷಾಹ, ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣಪ್ಪ, ಸಹಾಯಕ ಆಯುಕ್ತರಾದ ವಿವೇಕಾನಂದ ಪಿ., ಚಿದಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮ್ಪಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ ಜೆ.ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಇದ್ದರು.