ಸಿ ಮತ್ತು ಡಿ ವಿಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಗಮನ ಹರಿಸಿ : ರಾಹುಲ್ ರತ್ನಂ ಪಾಂಡೇಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 7- ಶಿಕ್ಷಕರು ಶಾಲೆಯಲ್ಲಿ ಸಿ ಮತ್ತು ಡಿ ವಿಭಾಗಗಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಡೇಯ ಅವರು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಜಿಲ್ಲೆಯ ಎಸ್ಎಸ್ಎಲ್.ಸಿ ಮಕ್ಕಳ ಫಲಿತಾಂಶ ಸುಧಾರಣೆ ಕುರಿತು ಸೆ.೦೬ರಂದುದು ಜಿಲ್ಲಾ ಪಂಚಾಯತ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಕಲಿಕಾಂಶಗಳನ್ನು ಸರಳೀಕರಣಗೊಳಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಬೇಕು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಒಟ್ಟು ೩೮ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿಯೊಬ್ಬ ನೋಡಲ್ ಅಧಿಕಾರಿಗೆ ೬ ಶಾಲೆಗಳನ್ನು ದತ್ತು ನೀಡಲಾಗಿದೆ. ಸರ್ಕಾರದ ಅಧೀನದಲ್ಲಿ ಜಿಲ್ಲೆಯಲ್ಲಿ ೨೦೮ ಶಾಲೆಗಳು ಇವೆ. ದತ್ತು ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಿ ಕಲಿಕಾ ಗುಣಮಟ್ಟದ ಹೆಚ್ಚಳಕ್ಕೆ ತೀವ್ರ ನಿಗಾ ವಹಿಸಿ ಎಲ್ಲಾ ಮಕ್ಕಳು ಉತ್ತೀರ್ಣರಾಗಲು ಅಗತ್ಯ ಕ್ರಮ ವಹಿಸಬೇಕು ಎಂದರು.
ನೋಡಲ್ ಅಧಿಕಾರಿಗಳು ವಾರದಲ್ಲಿ ಒಂದು ಅಥವಾ ಎರಡು ದಿನ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಶಾಲೆಯಲ್ಲಿ ಎಸ್ಎಸ್ಎಲ್.ಸಿ ಫಲಿತಾಂಶ ಸುಧಾರಣೆ ಮಾಡಲು ಕೈಗೊಡಂತಹ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಬೇಕು. ಶಿಕ್ಷಕರು ಪ್ರತಿ ದಿನ ಮಕ್ಕಳು ಶಾಲೆಗೆ ಬಂದ ತಕ್ಷಣ ದಿನಕ್ಕೊಂದು ಲೆಕ್ಕ ದಿನಕ್ಕೊಂದು ಪ್ರಶ್ನೆಯನ್ನು ನೀಡಬೇಕು. ಗ್ರೂಪ್ ಗಳನ್ನು ಮಾಡಿ ಜಾಣ ಮಕ್ಕಳ ಜೊತೆ ಸಮೀಕರಣಗೊಳಿಸಿ ಮಕ್ಕಳಿಗೆ ಕಲಿಕೆಯನ್ನು ಮಾಡಿಸಬೇಕು. ಪ್ರತಿ ವಾರಕ್ಕೊಮ್ಮೆ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ತಪ್ಪದೇ ಏರ್ಪಡಿಸಬೇಕು. ಪ್ರತಿ ೧೫ ದಿನಗಳಿಗೊಮ್ಮೆ ಪಾಲಕರ ಸಭೆಯನ್ನು ನೆಡಸಿ ಪಾಲಕ ಮತ್ತು ಪೋಷಕರಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ಪಾಲಕ ಮತ್ತು ಪೋಷಕರಿಗೆ ತಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಮನವರಿಕೆ ಮಾಡಿಸುವುದು. ಪಾಲಕರು ತಮ್ಮ ಮಕ್ಕಳ ಕಲಿಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಪ್ರತಿ ದಿನ ಎಲ್ಲಾ ಶಿಕ್ಷಕರು ಮಕ್ಕಳಿಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಬ್ಬಿಸುವುದು ಮತ್ತು ಮಕ್ಕಳು ಓದುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಆವಿಷ್ಕೃತ ಮತ್ತು ಹೊಸ ಬೋಧನಾ ತಂತ್ರ ಮತ್ತು ವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ತರಗತಿ ಕೋಣೆಯಲ್ಲಿ ಅಳವಡಿಸಿಕೊಂಡು, ಪರಿಣಾಮಕಾರಿ ಬೋಧನೆ ಮಾಡಿಸಬೇಕು. ಆಯಾ ವಿಷಯದಲ್ಲಿ ನುರಿತ ಅನುಭವಿ ಮತ್ತು ವಿಷಯ ತಜ್ಞರಿಂದ ಕಠಿಣ ಅಂಶಗಳ ಬಗ್ಗೆ ಮಾದರಿ ಪಾಠ ವಿಶೇಷ ಉಪನ್ಯಾಸ ಮತ್ತು ಮಾರ್ಗದರ್ಶನ ನೀಡಬೇಕು. ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಬೆಳಗಿನ ಒಂದು ಅವಧಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಮಕ್ಕಳಿಗೆ ಪರಿಹಾರ ಬೋಧನೆ ನೀಡುವದು. ಮಕ್ಕಳಿಗೆ ಡ್ರಿಲ್ ವರ್ಕ್ ಮಾಡಿಸುವುದು, ಹಾಗೆಯೇ ಸಾಯಂಕಾಲದ ಅವಧಿಯಲ್ಲಿ ಒಂದು ಅವಧಿಗೆ ಗುಂಪು ಅಧ್ಯಯನವನ್ನು ನಡೆಸಿ, ಈ ಸಮಯದಲ್ಲಿ ಮಕ್ಕಳ ಕಠಿಣತೆ ಬಗ್ಗೆ ಚರ್ಚಿಸಿ ಪರಿಹಾರವನ್ನು ಸೂಚಿಸಬೇಕು ಎಂದು ಹೇಳಿದರು.
ಪ್ರತಿ ವಿದ್ಯಾರ್ಥಿಯನ್ನು ವಯಕ್ತಿಕವಾಗಿ ಅಭ್ಯಾಸ ಸಾಮಗ್ರಿಗಳಾದ ಪಠ್ಯಪುಸ್ತಕ, ನೋಟ್ಸ್ ಹಾಗೂ ಇತರ ರೆಫರೆನ್ಸ್ ಪುಸ್ತಕಗಳನ್ನು ಪರಿಶೀಲಿಸುವುದು ರೊಂದಿಗೆ ಅಪ್ಲೋಟ್ ಮಾಡುವುದು, ಕಲಿಕಾ ವಾತಾವರಣ ಬಗ್ಗೆ ಆಪ್ತ ಸಮಾಲೋಚಿಸಿ ದಾಖಲಿಸಿಕೊಳ್ಳುವುದು. ಸಮಸ್ಯಾತ್ಮಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪೋಷಕರಿಗೆ ಕಲಿಕಾ ಪ್ರಗತಿ ಕುರಿತು ಮನವರಿಕೆ ಮಾಡಿಕೊಡಬೇಕು. ಸತತ ೩ ದಿನಕ್ಕಿಂತ ಹೆಚ್ಚು ದಿನ ಗೈರುಹಾಜರಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅಂತಹ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪಾಲಕ – ಪೋಷಕರಿಗೆ ತಿಳಿಹೇಳಿ ಮಕ್ಕಳು ಶಾಲೆಗೆ ಹಾಜರಾಗುವಂತೆ ಮನವೊಲಿಸುವುದು. ಮಕ್ಕಳು ಹಾಗೂ ಪೋಷಕರಿಗೆ ಹಾಜರಾಗಲು ಎಸ್.ಎಸ್. ಎಲ್.ಸಿ.ಮಂಡಳಿ ನಿಯಮವಾದ ಶೇಕಡ ೭೫ ರಷ್ಟು ಕಡ್ಡಾಯ ಹಾಜರಾತಿಯ ಮನವರಿಕೆ ಮಾಡಿಸುವುದು. ಪ್ರತಿ ತಿಂಗಳು ಪಾಲಕ ಮತ್ತು ಪೋಷಕರ ಸಭೆಯಲ್ಲಿ ಆಯಾ ವಿದ್ಯಾರ್ಥಿಗಳ ಹಾಜರಾತಿ ಪ್ರಸ್ತಾಪಿಸಿ ಪಾಲಕರ ಗಮನಕ್ಕೆ ತರಬೇಕು. ಶಾಲೆಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಆಟದಲ್ಲೂ ಭಾಗವಹಿಸುವಂತೆ ಪ್ರೇರೆಪಿಸಬೇಕು ಹಾಗೂ ಶಾಲಾ ಅವಧಿಯಲ್ಲಿ ದಿನಕ್ಕೊಂದು ಯೋಗ ತರಗತಿಯನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಶಾಲೆಗೆ ಭೇಟಿ ನೀಡಿದ ನೋಡಲ್ ಅಧಿಕಾರಿಗಳಿಗೆ ಶಾಲಾ ಸಂದರ್ಶನದಲ್ಲಿ ಪರಿಶೀಲಿಸಿದ ಅಂಶಗಳು ಹಾಗೂ ನೀಡಿದ ಮಾರ್ಗದರ್ಶನದ ಬಗ್ಗೆ ಸಿಇಓ ಅವರು ಮಾಹಿತಿ ಪಡೆದರು.
ಈ ಸಂಧರ್ಭದಲ್ಲಿ ಮುನಿರಾಬಾದ್ ಡಯಟ್‌ನ ಪ್ರಾಚಾರ್ಯರು, ಬಿಇಒಗಳು ಬಿ.ಆರ್.ಸಿ.ಗಳು, ತಾಲ್ಲೂಕು ನೋಡಲ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.