ಮೃತ ಪತ್ರಕರ್ತ ರಾಜು ಕುಟುಂಬಕ್ಕೆ ಪರಿಹಾರ ಒದಗಿಲು ಪತ್ರಕರ್ತರಿಂದ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 13- ವೀಡಿಯೋ ಜರ್ನಲಿಸ್ಟ್ ರಾಜು ಅಂಗಡಿ ಅನಾರೋಗ್ಯದಿಂದ ನಿಧನ ಹೊಂದಿದ್ದು, ಈತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಮೀಡಿಯಾ ಕ್ಲಬ್ನ ಪದಾಧಿಕಾರಿಗಳು ಮತ್ತು ಸದಸ್ಯರು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಖಾಸಗಿ ಸುದ್ದಿವಾಹಿನಿಯ ವಿಡಿಯೋ ಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಜು ಅಂಗಡಿ ಸೆಪ್ಟಂಬರ್ ೧೩ರಂದು ಅನಾರೋಗ್ಯದಿಂದ ಧಾರವಾಡದಲ್ಲಿ ಅಕಾಲಿಕ ನಿಧನರಾಗಿದ್ದಾರೆ. ಕಳೆದೊಂದು ದಶಕದಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬಕ್ಕೆ ನಷ್ಟವಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ಅವರ ಕುಟುಂಬದ ದುಃಖದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಭಾಗಿಯಾಗಿದ್ದು, ತೀವ್ರ ಸಂತಾಪ ಸೂಚಿಸಿದೆ. ಮಾನವೀಯ ಹಿನ್ನೆಲೆಯಲ್ಲಿ ಹಾಗೂ ಮಾಧ್ಯಮ ರಂಗದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಅವರ ಕುಟುಂಬಕ್ಕೆ ಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೧೦ ಲಕ್ಷ ರೂ. ನೆರವು ನೀಡಬೇಕು ಎಂದು ಕ್ಲಬ್ ಸದಸ್ಯರು ಮನವಿ ಮೂಲಕ ಆಗ್ರಹಿಸಿದರು.
ವೀಡೀಯೋ ಜರ್ನಲಿಸ್ಟ್ ರಾಜು ಅಂಗಡಿ ನಿಧನಕ್ಕೆ ನಗರದ ಮೀಡಿಯಾ ಕ್ಲಬ್ ನಲ್ಲಿ ಶುಕ್ರವಾರ ಪದಾಧಿಕಾರಿಗಳು ಮತ್ತು ಸದಸ್ಯರು ಮೌನಾಚರಣೆ ಸಲ್ಲಿಸಿದರು.
ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ., ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಕಾರ್ಯದರ್ಶಿ ದತ್ತು ಕಮ್ಮಾರ್, ಖಜಾಂಚಿ ಅನಿಲ ಬಾಚನಹಳ್ಳಿ, ಪತ್ರಕರ್ತರಾದ ಹುಸೇನ್ ಪಾಷಾ, ಸೋಮರಡ್ಡಿ ಅಳವಂಡಿ, ಸಂತೋಷ್ ದೇಶಪಾಂಡೆ, ಬಸವರಾಜ್ ಕರ್ಕಿಹಳ್ಳಿ, ಶ್ರೀಕಾಂತ್ ಅಕ್ಕಿ, ಪ್ರಮೋದ್ ಜಿ.ಕೆ. ಇದ್ದರು.
