ಕೊಪ್ಪಳ ಜಿಲ್ಲೆಯ ಶಾಲೆಗಳಿಗೆ ತುಸು ನೆಮ್ಮದಿ ತಂದ ಹೊಸ ಶಿಕ್ಷಕರ ನೇಮಕಾತಿ : ಸ್ಥಳ ಆಯ್ಕೆ ಮಾಡಿಕೊಂಡ ನೂತನ ಶಿಕ್ಷಕರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05- ಜೂನ್ ಮೊದಲ ವಾರದಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ನೂರಾರು ಶಿಕ್ಷಕರು ಕೊಪ್ಪಳ ಜಿಲ್ಲೆಯಿಂದ ಹೊರ ಹೋಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ತೊಂದರೆಯಾಗಿತ್ತು. ಆದರೆ ನಿನ್ನೆ ಕೊಪ್ಪಳದ ಉಪನಿರ್ದೇಶಕರ ಕಚೇರಿಯಲ್ಲಿ ಜರುಗಿದ ಕೌನ್ಸ್ಲಿಂಗ್ ನಲ್ಲಿ ಹೊಸದಾಗಿ ನೇಮಕಾತಿ ಹೊಂದಿದ 6-8 ನೇ ತರಗತಿ ಶಿಕ್ಷಕರು ಸ್ಥಳ ಆಯ್ಕೆ ಮಾಡಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ತುಸು ನೆಮ್ಮದಿ ತಂದಿದೆ.
ಕೊಪ್ಪಳ ಉಪನಿರ್ದೇಶಕರ ಕಛೇರಿಯಲ್ಲಿ ತಡರಾತ್ರಿಯವರೆಗೆ ನಡೆದ ಸ್ಥಳ ನಿಯುಕ್ತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ಮಾಧ್ಯಮದ ಗಣಿತ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 281 ಶಿಕ್ಷಕರು, ಗಣಿತ ವಿಜ್ಞಾನ (ಉರ್ದು ಮಾಧ್ಯಮ) 3 ಶಿಕ್ಷಕರು, ಸಮಾಜ ವಿಜ್ಞಾನ (ಕನ್ನಡ ಮಾಧ್ಯಮ) 59 ಶಿಕ್ಷಕರು, ಸಮಾಜ ವಿಜ್ಞಾನ (ಉರ್ದು ಮಾಧ್ಯಮ) 2 ಶಿಕ್ಷಕರು, ಬಯೋಲಜಿ ವಿಷಯಕ್ಕೆ 67 ಶಿಕ್ಷಕರು ಹಾಗೂ ಇಂಗ್ಲಿಷ್ ವಿಷಯದ 54 ಹುದ್ದೆಗಳಲ್ಲಿ 35 ಅಭ್ಯರ್ಥಿಗಳು ಸ್ಥಳ ಆಯ್ಕೆ ಮಾಡಿಕೊಂಡಿರುತ್ತಾರೆ*. ಇನ್ನುಳಿದವರು ಸೋಮವಾರ ಕೌನ್ಸಿಲಿಂಗ್ ನಲ್ಲಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪದವೀಧರ ಪ್ರಾಥಮಿಕ (6-8) ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಮ್ಯಾಗಳಮನಿ ತಿಳಿಸಿದರು.
ಇದೇ ವೇಳೆ ಕಚೇರಿಗೆ ಭೇಟಿ ನೀಡಿದ್ದ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರು ನೂತನ ಶಿಕ್ಷಕರಿಗೆ ಶುಭಕೋರಿ ನಿಮ್ಮ ಪ್ರತಿಹೆಜ್ಜೆಯಲ್ಲೂ ಸರ್ಕಾರಿ ನೌಕರರ ಸಂಘ ನಿಮ್ಮ ಜೊತೆಗೆ ಇರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು*
ಈ ಎಲ್ಲಾ ಪ್ರಕ್ರಿಯೆಯಲ್ಲಿ ಉಪನಿರ್ದೇಶಕರಾದ ಶ್ರೀಶೈಲಪ್ಪ ಬಿರಾದಾರ ಹಾಗೂ ಕಚೇರಿ ಪತ್ರಾಂಕಿತ ವ್ಯವಸ್ಥಾಪಕರಾದ ಬಸವಂತರಾವ್ ಕುಲಕರ್ಣಿ ಹಾಗೂ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.ಕೌನ್ಸಿಲಿಂಗ್ ಪ್ರಕ್ರಿಯೆ ನೇಮಕಾತಿಯ ನೋಡಲ್ ಅಧಿಕಾರಿಗಳಾಗಿ ಶ್ರೀಮತಿ ಉಮಾದೇವಿ ಸೊನ್ನದ್ ರವರು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಶ್ರೀಯುತ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಬೀರಪ್ಪ ಅಂಡಗಿ,ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಶ್ರೀಕಾಂತ ಮಟ್ಟಿ, ನೌಕರ ಸಂಘದ ನಿರ್ದೇಶಕರಾದ ಶ್ರೀಯುತ ಬಾಳಪ್ಪ ಕಾಳೆ, ಗಂಗಾವತಿ ಜಿ.ಪಿ.ಟಿ ಸಂಘದ ತಾಲೂಕಾಧ್ಯಕ್ಷರಾದ ವಿರುಪಾಕ್ಷಿ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ಶ್ರೀಯುತ ಸುಭಾನ್, ಕೊಪ್ಪಳ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ರಮೇಶ್ ಹಳ್ಳಿ, ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಶ್ರೀಯುತ ಯಮನೂರಪ್ಪ ಗದಾರಿ, ಯಲಬುರ್ಗಾ ತಾಲೂಕ ನೌಕರರ ಸಂಘದ ನಿರ್ದೇಶಕರಾದ ಶ್ರೀಯುತ ಬಸವರಾಜ್ ಮೇಟಿ, ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಹನುಮಂತಪ್ಪ ಕುರಿ ಹಾಗೂ ಅಂದಪ್ಪ ಬೋಳರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
