2c136fae-be38-4577-97e1-318669006cc9

ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯವಿವಾಹ ತಡೆದು, ಬಾಲಕಿಯ ರಕ್ಷಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,13- ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ಮಾರ್ಚ್ 11 ರಂದು ಆಯೋಜಿಸಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಇತರೆ ಇಲಾಖೆಗಳ ಸಹಕಾರದಲ್ಲಿ ತಡೆದಿದ್ದು, ಬಾಲಕಿಯನ್ನು ಮುಂದಿನ ಪೋಷಣೆ ಹಾಗೂ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.

ತಲ್ಲೂರು ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಬಾಲ್ಯ ವಿವಾಹವನ್ನು ಮಾಡಲಾಗುತ್ತಿದೆ ಎಂದು ಮಕ್ಕಳ ಸಹಾಯವಾಣಿ-1098/112ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ, ಆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಮೇಲ್ವಿಚಾರಕಿಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ-1098/112 ಸಿಬ್ಬಂದಿಗಳು ತುರ್ತಾಗಿ ಸ್ಥಳಕ್ಕೆ ಧಾವಿಸಿ, ಬಾಲಕಿಯ ಮನೆಗೆ ಭೇಟಿ ಮಾಡಿ ವಿಚಾರಿಸಿದ್ದು, ವಿವಾಹವನ್ನು ಮಾಡುತ್ತಿರುವುದು ತಿಳಿದು ಬಂದಿತು.

ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಕುರಿತು ಹಾಗೂ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ನೀಡಿ, ಬಾಲಕಿಗೆ 18 ವರ್ಷ (05.01.2008) ಪೂರ್ಣಗೊಳ್ಳದ ಕಾರಣ ಬಾಲಕಿಯನ್ನು ರಕ್ಷಿಸಿ, ಪೋಷಣೆ ಮತ್ತು ರಕ್ಷಣೆಗಾಗಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ತುರ್ತಾಗಿ ಹಾಜರು ಪಡಿಸಲು ವಾಹನ ಲಭ್ಯವಾಗದಿದ್ದರಿಂದಾಗಿ, ಯಲಬುರ್ಗಾ ತಹಶೀಲ್ದಾರರು ತಮ್ಮ ಸರಕಾರಿ ವಾಹನವನ್ನು ನೀಡುವ ಮೂಲಕ ಬಾಲಕಿಯನ್ನು ಮುಂದಿನ ಪೋಷಣೆ ಮತ್ತು ರಕ್ಷಣೆ ಹಿತದೃಷ್ಠಿಯಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲು ಸಹಕರಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!